(ನ್ಯೂಸ್ ಕಡಬ) newskadaba.com ಉಡುಪಿ, ಅ.17: ಬಾಬುತೋಟ ಧಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟಿನಿಂದ ಅಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಜೋನ್ ಎಲ್ ಎಂದು ಗುರುತಿಸಲಾಗಿದೆ.
ಕನ್ಯಾಕುಮಾರಿ ತಮಿಳುನಾಡು ಇವರ ಇಮ್ಯಾನುವೆಲ್ ಗಿಲ್ ನೆಟ್ ಬೋಟ್ ನಲ್ಲಿ ಜೋನ್.ಎಲ್ ಹಾಗೂ ಇತರ 18 ಮಂದಿ ಮೀನುಗಾರರು ಜೊತೆಗಿದ್ದರು. ಮೀನುಗಾರಿಕೆಗೆ ತಮಿಳುನಾಡಿನಿಂದ ತೆರಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ, ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಅಕ್ಟೋಬರ್ 12 ರಂದು ರಾತ್ರಿ ಮಲ್ಪೆ ಬಂದರಿನ ಬಾಬುತೋಟ ಧಕ್ಕೆಗೆ ಬಂದು ಬೋಟ್ ನ್ನು ಕಟ್ಟಿ ಅದರಲ್ಲಿಯೆ ನೆಲೆಸಿದ್ದರು. ಅಕ್ಟೋಬರ್ 14 ರಂದು ಸಂಜೆ 6.30 ರ ಸುಮಾರಿಗೆ ಜಾನ್ ದೋಣಿಯ ಹಿಂಬದಿ ಅಳವಡಿಸಿದ ಹ್ಯಾಂಡ್ ಪಂಪ್ ಬಳಿ ಹೋದವರು ಆಯಾತಪ್ಪಿ ಕಾಲು ಜಾರಿ ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದು ಕಾಣೆಯಾಗಿದ್ದರು. ಕಳೆದ ದಿನ ರಾತ್ರಿ ಬಾಪುತೋಟ ಧಕ್ಕೆಯಲ್ಲಿ ಮೃತ ಶರೀರ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..