(ನ್ಯೂಸ್ ಕಡಬ) newskadaba.com ಕಡಬ,ಸೆ.23, ವಿದ್ಯಾರ್ಥಿ ಮತ್ತು ಸಮಾಜದ ನಡುವಿನ ರಚನಾತ್ಮಕವಾದ ಸಂಬಂಧ ಬೆಳೆಯಬೇಕೆಂಬ ಉದ್ದೇಶದಿಂದ ಭಾರತದಾತ್ಯಂತ ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ಸೆಪ್ಟಂಬರ್ 24ರಂದು ಆಚರಿಸಲಾಗುತ್ತದೆ.
ಸ್ವಾತಂತ್ರ್ಯ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಮೂಡಿಸಲು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ, ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಬಹುದೆಂದು ಡಾ| ರಾಧಾಕೃಷ್ಣನ್ ನೇತೃತ್ವದ ‘ವಿಶ್ವವಿದ್ಯಾನಿಲಯ ಅನುಧಾನ ಸಮಿತಿ’ ಭಾರತ ಸರ್ಕಾರಕ್ಕೆ ಅನುಮೋದನೆ ನೀಡಿತು.
ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ, ವಿದ್ಯಾರ್ಥಿ ಮತ್ತು ಸಮುದಾಯದ ನಡುವೆ ಸುಖಕರವಾದ ಮತ್ತು ರಚನಾತ್ಮಕವಾದ ಸಂಬಂಧ ಬೆಳೆಯಬೇಕು ಎಂಬ ಆಶಯದೊಂದಿಗೆ, ಸ್ವಯಂ ಪ್ರೇರಿತರಾಗಿ ಸಮುದಾಯ ಸೇವಾಭಾವನೆ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆಯನ್ನು ಜಾರಿಗೆ ತರಲಾಯಿತು.
ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕನಸಿನ ಕಲ್ಪನೆಯಾದ ‘ರಾಮರಾಜ್ಯ’ದ ಆಶಯದೊಂದಿಗೆ, ಗಾಂಧೀಜಿಯವರ ಜನ್ಮದಿನದ 100ನೇ ವರ್ಷದಲ್ಲಿ ಅಂದರೆ 1969ರಲ್ಲಿ ಆರಂಭಿಸಲಾಯಿತು. ಗಾಂಧೀಜಿಯವರು ಸಮಾಜ ಸೇವೆಯನ್ನೇ ಕಾಯಕವಾಗಿ ಮಾಡಿಕೊಂಡು ಅದನ್ನು ಧರ್ಮದಂತೆ ಆಚರಿಸುತ್ತಿದ್ದರು. ಇದರಿಂದಾಗಿಯೇ, ಅವರ ಪುಣ್ಯಸ್ಮರಣೆಗಾಗಿ, ಗೌರವಾರ್ಥವಾಗಿ ಎನ್. ಎಸ್. ಎಸ್ ನ್ನು ಅವರ ಜನ್ಮ ಶತಮಾನೋತ್ಸವದ ವರ್ಷವಾದ 1969ನೇ ಸಷ್ಟೆಂಬರ್ 24ರಂದು, ದೇಶಾದ್ಯಂತ ವಿವಿಧ ರಾಜ್ಯಗಳ 37 ವಿಶ್ವವಿದ್ಯಾನಿಲಯಗಳಲ್ಲಿ ಪ್ರಾರಂಭಿಸಲಾಯಿತು. ಈ ಕಾರಣಕ್ಕಾಗಿಯೇ ಸಷ್ಟಂಬರ್ 24ನ್ನು ಎನ್.ಎಸ್.ಎಸ್. ದಿನ ಎಂದು ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.
ಎನ್. ಎಸ್. ಎಸ್. ನ ಬಹಳ ಪ್ರಮುಖವಾದ ದ್ಯೇಯವೆಂದರೆ ಕಲಿಕೆಯ ಜೊತೆಗೆ ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಉಂಟಾಗುವಂತೆ ಮಾಡುವುದು. ಇದು ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳೇ ನಡೆಸುವ ಒಂದು ಕಾರ್ಯಕ್ರಮ ಆಗಿರುತ್ತದೆ. ಅಧ್ಯಾಪಕರು ಮತ್ತು ಶಿಕ್ಷಕರು ಕೇವಲ ನಿಮಿತ ಮಾತ್ರವಾಗಿದ್ದು ವಿದ್ಯಾರ್ಥಿಗಳಿಗೆ ಯೋಜನೆ ಅನುಷ್ಠಾನದ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾರೆ. ರಾಷ್ಟ್ರೀಯ ಸೇವಾ ಯೋಜನೆಯ ಮೂಲ ದ್ಯೇಯವೆಂದರೆ, ಮಕ್ಕಳು ನಾಲ್ಕು ಗೋಡೆಗಳ ನಡುವೆ ಪಾಠ ಕಲಿಯುವುದರ ಜೊತೆಗೆ, ಸಮುದಾಯದ ಜನರೊಂದಿಗೆ ಬೆರೆತು, ಅವರ ನೋವು ನಲಿವು, ಸುಖ ದುಖ, ಕಷ್ಟ ಕಾರ್ಪಣ್ಯಗಳಲ್ಲಿ ಪಾಲುಗೊಳ್ಳುವುದಾಗಿದೆ. ಆ ಮೂಲಕ ಸಮಾಜದ, ದೇಶದ ಮತ್ತು ವ್ಯಯಕ್ತಿಕ ಬೆಳೆವಣಿಗೆಯನ್ನು ಪೂರೈಸಿಕೊಳ್ಳುವುದು ಎಂಬುದಾಗಿದೆ. ಎನ್.ಎಸ್.ಎಸ್. ಮುಖಾಂತರ ವಿದ್ಯಾರ್ಥಿಗಳು ಮತ್ತು ಸಮೂದಾಯದ ಜನರು ಒಂದೆಡೆ ಸೇರಿ ಒಂದೇ ವೇದಿಕೆಯಲ್ಲಿ ತಮ್ಮಲ್ಲಿ ಹುದುಗಿರುವ ಸೂಕ್ತ ಪ್ರತಿಭೆಗಳನ್ನು ಹೊರಹೊಮ್ಮಿಸಲು ಸಹಾಯ ಮಾಡಿ ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪುರಕವಾದ ವಾತಾವರಣವನ್ನು ಕಲ್ಪಿಸುವುದು.
1969ರಲ್ಲಿ ಎನ್.ಎಸ್.ಎಸ್ ಆರಂಭವಾದಾಗ 40,000 ಪದವಿ ವಿದ್ಯಾರ್ಥಿಗಳು ಇದರಲ್ಲಿ ನೊಂದಾಯಿಸಿ ಕೊಂಡರು. ಪ್ರಾರಂಭದ ದಿನಗಳಲ್ಲಿ ಕೇವಲ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಎನ್.ಎಸ್.ಎಸ್, ಕ್ರಮೇಣ ವೈದ್ಯಕೀಯ, ತಾಂತ್ರಿಕ, ಪೋಲಿಟಿಕ್ನಿಕ್, ನರ್ಸಿಂಗ್, ಪಾರ್ಮಸಿ, ಪಿಸಿಯೋಥೆರಾಫಿ, ಬಿ.ಯೆಡ್, ಡಿ.ಯೆಡ್ ಮತ್ತು ಪದವಿ ಪೂರ್ವ ತರಗತಿಗಳಿಗೂ ವಿಸ್ತಾರಗೊಂಡಿದೆ. ಇಂದು ನಮ್ಮ ದೇಶಗಳಲ್ಲಿ ಎನ್.ಎಸ್.ಎಸ್. ಬಹಳ ವಿಸ್ತಾರವಾಗಿ ಬೆಳೆದು, ರಾಷ್ಟ್ರದ ಅತೀ ದೊಡ್ಡವಾದ ಯುವ ಸಂಘಟನೆಯಾಗಿ ಹೊರಹೊಮ್ಮಿದೆ. ಇಂದು ನಮ್ಮ ದೇಶದಾತ್ಯಂತ ಸರಿ ಸುಮಾರು 35 ಲಕ್ಷ ಎನ್.ಎಸ್.ಎಸ್. ಸ್ವಯಂ ಸೇವಕರು, 35,000 ಮಿಕ್ಕಿ ಯೋಜನಾಧಿಕಾರಿಗಳು ತುಂಬಾ ಪರಿಣಾಮಕಾರಿಯಾಗಿ ಎನ್. ಎಸ್.ಎಸ್. ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವುದು ಬಹಳ ಸಂತಸದ ವಿಚಾರ. ನಮ್ಮ ಕರ್ನಾಟಕ ರಾಜ್ಯ ಒಂದರಲ್ಲೇ ಸರಿ ಸುಮಾರು 35ಲಕ್ಷ ಸ್ವಯಂ ಸೇವಕರ ಮತ್ತು 3500 ಯೋಜಾನಾಧಿಕಾರಿಗಳು ಎನ್. ಎಸ್. ಎಸ್. ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಏನನ್ನು ಕಲಿಸಲಾಗುತ್ತದೆ:
ಎನ್.ಎಸ್.ಎಸ್. ಆರಂಭದ ದಿನಗಳಲ್ಲಿ ಪರಿಪೂರ್ಣ ಸಾಕ್ಷರತೆ, ಗಿಡನೆಡುವುದು, ಶಾಲಾ ಆಟದ ಮೈದಾನ ವಿಸ್ತಾರಿಸುವುದು, ರಸ್ತೆ ರಿಪೇರಿ, ಶ್ರಮದಾನ ಇತ್ಯಾದಿ ಕೆಲಸಗಳಿಗೆ ಆದ್ಯತೆ ನೀಡಲಾಗಿತ್ತು. ಈಗಿನ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ದೃಷ್ಟಿಕೋನ ಬದಲಾಗಿದ್ದು, ಈ ಸಾಂಪ್ರದಾಯಕ ಕೆಲಸದೊಂದಿಗೆ ವ್ಯಕ್ತಿತ್ವ ವಿಕಸನ, ಸಮುದಾಯ ಚಟುವಟಿಕೆ ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ವೃದ್ಧಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದೇ ಕಾರಣಕ್ಕಾಗಿಯೇ ರಾಷ್ಟ್ರೀಯ ಸೇವಾ ಯೋಜನೆ ಕೇವಲ ಮಣ್ಣು ಹೊರುವುದಕ್ಕೆ ಸೀಮಿತವಾಗಿರದೇ ಬದಲಾಗಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಿ, ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಬಹಳ ಮುಖ್ಯವಾದ ಪಾತ್ರ ರಾಷ್ಟ್ರೀಯ ಸೇವಾ ಯೋಜನೆ ವಹಿಸುತ್ತದೆ. ಇದಕ್ಕಾಗಿಯೇ ಬಲ್ಲವರು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯ ಸೇವಕರು ರಸ್ತೆ ನಿರ್ಮಿಸಿದರೆ ರಸ್ತೆಯು ವಿದ್ಯಾರ್ಥಿಯ ಜೀವನವನ್ನು ರೂಪಿಸುತ್ತದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು, ನಾಲ್ಕುಗೋಡೆಯ ನಡುವೆ ಕಲಿಯುವ ಪುಸ್ತಕದ ಬದನೆಕಾಯಿಗಿಂತ, ಸಮುದಾಯದ ನಡುವೆ ಕಲಿಯುವ ಅನುಭವದ ಶಿಕ್ಷಣ ವಿಧಾನ ಎಂದರೂ ತಪ್ಪಲ್ಲ. ಈಗಿನ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ವಿದ್ಯಾರ್ಥಿಗಳ ಯೋಜನಾ ಕುಶಲತೆ ತಾಂತ್ರಿಕ ಕುಶಲತೆ, ಸಂವಹನ ಕುಶಲತೆ, ಮುಂದಾಳತ್ವ ಕುಶಲತೆ, ಮೌಲ್ಯಮಾಪನ ಕುಶಲತೆ, ಆತ್ಮ ವಿಶ್ವಾಸ ಮತ್ತು ಮಾನವೀಯ ಸಂಬಂಧಗಳ ಕುಶಲತೆಯನ್ನು ಸಿದ್ಧಿಸಲು ಮತ್ತು ವೃದ್ಧಿಸಲು ಅನುಕೂಲಕರವಾದ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ.
ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ರಾಷ್ಟ್ರ ಭಕ್ತಿಯನ್ನು ಮೂಡಿಸಲು ಪೂರಕವಾದ ರಾಷ್ಟ್ರೀಯ ಭಾವೈಕ್ಯತೆ ಶಿಬಿರ, ಸಹಬಾಳ್ವೆ ಸಹೋದರತ್ವವನ್ನು ಸಕಾರಗೊಳಿಸಲು, ವಿಶೇಷ ತರಬೇತಿ ಶಿಬಿರಗಳು, ರಕ್ತದಾನ ಶಿಬಿರಗಳು ಮುಂತಾದುವುಗಳನ್ನು ಆಯೋಜಿಸಲಾಗುತ್ತದೆ. ಬೇರೆ ಬೇರೆ ಜಾತಿಯ ಧರ್ಮದ ಊರಿನ ಸಂಸ್ಕೃತಿಯ ಮಕ್ಕಳು ಜೊತೆಗೂಡಿ ವಿಶೇಷ ಶಿಬಿರಗಳಲ್ಲಿ ಹಂಚಿಕೊಂಡು ಜೊತೆಯಲ್ಲಿ ದುಡಿದು ಬೇಯಿಸಿ ತಿನ್ನುವುದರಿಂದ ವಿದ್ಯಾರ್ಥಿಗಳಲ್ಲಿ ಸಹಬಾಳ್ವೆ, ಸಹೋದರತ್ವ ಮತ್ತು ಮಾನವೀಯ ಸಂಬಂಧಗಳು ಪುನಃ ಬೆಸೆಯುತ್ತದೆ ಮತ್ತು ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಡುತ್ತದೆ.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಘೋಷವಾಕ್ಯ:
ಎನ್. ಎಸ್.ಎಸ್. ನ ಘೋಷವಾಕ್ಯ “ನನಗಲ್ಲ ನಿನಗೆ” (NOT ME BUT YOU) ಎಂಬುದಾಗಿದೆ. ಈ ವಾಕ್ಯ ನಿಸ್ವಾರ್ಥ ಸೇವೆಯ ಮಹತ್ವವನ್ನು ಮತ್ತು ಪ್ರಜಾಪ್ರಭುತ್ವದಲ್ಲಿ ಸಹಬಾಳ್ವೆ ಮತ್ತು ಸಹೋದರತೆಯ ಮಹತ್ವವನ್ನು ಸಾರಿ ಹೇಳುತ್ತದೆ. ಈ ವಾಕ್ಯ ಮನುಷ್ಯ ಮನುಷ್ಯನಿಗೆ ಸಹಾಯ ಮಾಡಿ ಪರಸ್ಪರ ನಂಬಿಕೆ, ವಿಶ್ವಾಸ, ಹೊಂದಾಣಿಕೆಯಿಂದ ಸಹಬಾಳ್ವೆಯ ಜೀವನ ನಡೆಸಬೇಕೆಂದು ಪ್ರತಿಪಾದಿಸುತ್ತದೆ. ಈ ಘೋಷವಾಕ್ಯದ ಸಾರಾಂಶವೇನೆಂದರೆ ವ್ಯಯುಕ್ತಿಕ ಹಿತಾಸಕ್ತಿ ಸಮಾಜದ ಹಿತಾಸಕ್ತಿಯನ್ನು ಅವಲಂಭಿಸಿರುತ್ತದೆ. “ಸ್ವಂತಕ್ಕೆ ಸ್ವಲ್ಪ ಮತ್ತು ಸಮಾಜಕ್ಕೆ ಸರ್ವಸ್ವ” ಎಂಬ ಸಂದೇಶದೊಂದಿಗೆ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯ ಸದುದ್ದೇಶವನ್ನು ಗಮನದಲ್ಲಿರಿಸಿಕೊಂಡು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಆ ಮೂಲಕ ರಾಷ್ಟ್ರದ ಮತ್ತು ವ್ಯಕ್ತಿಯ ವ್ಯಕ್ತಿತ್ವದ ವಿಕಸನ ಉಂಟಾಗುತ್ತದೆ.
ರಾಷ್ಟ್ರೀಯ ಸೇವಾ ಯೋಜನೆಯ ಚಿಹ್ನೆ:
ಎನ್. ಎಸ್.ಎಸ್. ನ ಚಿಹ್ನೆಯನ್ನು ಒರಿಸ್ಸಾ ರಾಜ್ಯದ ಸುಪ್ರಸಿದ್ಧ ಕೋನಾರ್ಕದ ಸೂರ್ಯ ದೇವಾಲಯದ ರಥದ ಚಕ್ರದ ಮಾದರಿಯಲ್ಲಿ ರಚಿಸಲಾಗಿದೆ. ಈ ರಥದ ಚಕ್ರವು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ಸೂಚಿಸುತ್ತದೆ. ಮತ್ತು ಕಾಲದಿಂದ ಕಾಲಕ್ಕೆ ಆಗುವ ಜೀವನ ರಥದ ಬೆಳವಣಿಗೆಯನ್ನು ಸೂಚಿಸುತ್ತದೆ. ಎಸ್.ಎಸ್.ಎನ್. ಚಿಹ್ನೆಯು ಈ ರಥದ ಚಕ್ರದ ಸಂಕ್ಷಿಪ್ತ ರೂಪವಾಗಿದ್ದು ಮುಖ್ಯವಾಗಿ ಚಲನೆಯನ್ನು ಸೂಚಿಸುತ್ತದೆ. ಈ ಚಕ್ರವು ಜೀವನದ ಬೆಳವಣಿಗೆಯ ಏರುಪೇರು, ಕಷ್ಟ ಸುಖ ಇತ್ಯಾದಿಗಳನ್ನು ಪ್ರತಿಬಿಂಬಿಸುತ್ತದೆ. ಒಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಂಡವರೆಲ್ಲರೂ ನಿರಂತರವಾಗಿ ಸಮಾಜದ ಅಭಿವೃದ್ಧಿ ಮತ್ತು ಸಮುದಾಯದ ಏಳಿಗೆಗೋಸ್ಕರ ನಿರಂತರ ಶ್ರಮಿಸಬೇಕೆಂದು ತಿಳಿಸುತ್ತದೆ. ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಈ ಚಿಹ್ನೆ ಸೂಚಿಸುತ್ತದೆ. ಕೋನಾರ್ಕದ ರಥದ ಚಕ್ರದಂತೆ ಈ ಚಿಹ್ನೆಯಲ್ಲಿಯೂ ಎಂಟು ಗೆರೆಗಳಿದ್ದು ಇವು 24 ಗಂಟೆಗಳನ್ನು ಸೂಚಿಸುತ್ತದೆ. ಇದರಾರ್ಥ ದಿನದ 24 ಗಂಟೆಯೂ ಸ್ವಯಂ ಸೇವಕರು ಸೇವೆಗೆ ಸಿದ್ಧರಾಗಿರಬೇಕೆಂದು ತಿಳಿಸುತ್ತದೆ. ಅದೇ ರೀತಿ ಬಿಳಿ, ಕೆಂಪು ಮತ್ತು ನೀಲಿ ಬಣ್ಣಗಳು ಚಿಹ್ನೆಯಲ್ಲಿವೆ. ಕೆಂಪು ಬಣ್ಣ ತ್ಯಾಗದ ಸಂಕೇತ, ಬಿಳಿ ಬಣ್ಣ ಶಾಂತಿಯ ಸಂಕೇತ ಮತ್ತು ನೀಲಿ ಬಣ್ಣ ಸಮೃದ್ಧಿಯ ಸಂಕೇತವಾಗಿದ್ದು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಯಾವುದೇ ರೀತಿಯಲ್ಲಿ ತ್ಯಾಗಕ್ಕೆ ತಯಾರಿರುತ್ತಾರೆ. ಮತ್ತು ದೇಶದ ಸಮೃದ್ಧಿಗೆ ಮತ್ತು ಮನುಷ್ಯ ಕಲ್ಯಾಣಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಬೇಕೆಂಬ ಆಶಯ ಅಡಗಿದೆ.
ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ:
1. ನಾಯಕತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದು
2. ಸಾಕ್ಷರತೆ ಮೂಲಕ ಅಕ್ಷರ ಕ್ರಾಂತಿಗೆ ನೆರವಾಗುವುದು.
3. ತಾವು ವಾಸಮಾಡುವ ಸಮುದಾಯ ಸಮಾಜಗಳ ಸಮಸ್ಯೆ ಮತ್ತು ಅಗತ್ಯಗಳನ್ನು ಅರಿಯುವುದು ಮತ್ತು ಪರಿಹಾರಕ್ಕೆ ಯತ್ನಿಸುವುದು
4. ವ್ಯಕ್ತಿಯಾಗಿ ಈ ಸಮಾಜಕ್ಕೆ ಏನು ಮಾಡಬಲ್ಲೆ ಎಂಬ ಚಿಂತನೆ ಮಾಡುವುದು
5. ಗ್ರಾಮ ಮತ್ತು ಗುಡಿ ಕೈಗಾರಿಕೆಗಳ ಪ್ರಗತಿಗೆ ನೆರವಾಗುವುದು.
6. ಗ್ರಾಮಗಳ ಆರೋಗ್ಯ ನೈರ್ಮಲ್ಯಗಳನ್ನು ಕುರಿತು ಚಿಂತನೆ ವಿಮರ್ಶೆ ಮಾಡುವುದು.
7. ಪರಿಸರದ ಬಗ್ಗೆ ಕಾಳಜಿ ಹುಟ್ಟಿಸುವುದು ಮತ್ತು ಪರಿಸರ ಸಂರಕ್ಷಣೆಯಲ್ಲಿ ನೆರವಾಗುವುದು.
8. ಹಿಂದುಳಿದ ಮತ್ತು ದುರ್ಬಲ ವರ್ಗದವರ ಜನರ ಬದುಕಿನ ಕಷ್ಟಸುಖಗಳಿಗೆ ಸ್ಮಂದಿಸುವುದು.
9. ಕೋಮವಾದವನ್ನು ತೊಲಗಿಸಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವುದು. ಮೇಲು, ಕೀಳು, ಭಾವನೆಯನ್ನು ತೊಲಗಿಸಿ ವರ್ಗಿರಹಿತ ಸಮಾಜವನ್ನು ನಿರ್ಮಿಸಲು ಶ್ರಮಿಸುವುದು.
10. ಮೈತ್ರಿ, ಸಹೋಧರತ್ವ ಸಹಬಾಳ್ವೆ, ಸೌರ್ಹಾರ್ದತೆ, ಸಹಕಾರ ಸಹಜೀವನ ಮತ್ತು ಶಿಸ್ತುಬದ್ಧ ಜೀವನವನ್ನು ಮೈಗೂಡಿಸಿಕೊಳ್ಳುವುದು. ಆ ಮೂಲಕ ವೈಯುಕ್ತಿಕ ಬೆಳವಣಿಗೆ ಮತ್ತು ರಾಷ್ಟ್ರದ ಬೆಳವಣಿಗೆ ಪುರಕವಾದ ವಾತಾವರಣ ಕಲ್ಪಿಸುವುದು.
ಪ್ರತಿಫಲಾಕ್ಷೆ ಇಲ್ಲದೆ ಮಾಡುವ ಸೇವೆ ಅತ್ಯಂತ ಪವಿತ್ರವಾಗಿರುವುದು. ಭಗವದ್ಗೀತೆಯಲ್ಲಿ ಹೇಳಿದ ಹಾಗೆ “ ಕರ್ಮಣ್ಯೆವ ಅಧಿಕಾರಸ್ಥೇ ಮಾಫಲೇಷು ಕದಾಚನ” ಅಂದರೆ ಯಾವುದೇ ರೀತಿಯ ದುರಾಲೋಚನೆ ಇಲ್ಲದೆ ಪ್ರತಿಫಲಾಕ್ಷೆ ಇಲ್ಲದೆ ಎಲ್ಲರನ್ನು ಒಂದೇ ದೃಷ್ಟಿಯಿಂದ ನೋಡಿ ಸೇವೆ ಮಾಡುವುದೇ ಮನುಷ್ಯನ ಧರ್ಮ. ಅದರಲ್ಲಿಯೇ ನಮ್ಮ ಊರಿನ, ಗ್ರಾಮದ, ರಾಜ್ಯದ ಮತ್ತು ನಾಡಿನ ಒಳಿತು ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
ರಾಷ್ಟ್ರೀಯ ಸೇವಾಯೋಜನೆ ಸಂಯೋಜನಾಧಿಕಾರಿ ಗಳು
ನಿಟ್ಟೆ ವಿಶ್ವವಿದ್ಯಾನಿಲಯ
ಮೊ. : 09845135787