(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.08: ಮನೆಯಲ್ಲಿ ದುಡಿಯುವರು ಒಬ್ಬರೇ ಆಗಿದ್ದು, ಅವರಿಗೂ ಕೊರೊನಾ ಬಂದಿದ್ದರೆ, ಆ ಕುಟುಂಬಕ್ಕೆ ಸರ್ಕಾರದಿಂದಲೇ ಉಚಿತವಾಗಿ ಆಹಾರಧಾನ್ಯ ವಿತರಿಸಲುವ ಯೋಜನೆಯನ್ನು ರೂಪಿಸಲಾಗಿದೆ. ಒಂದು ವೇಳೆ ಮನೆಯಲ್ಲಿ ಏಕೈಕ ದುಡಿಮೆದಾರರಿಗೆ ಕೊರೊನಾ ಬಂದರೇ ಆ ಕುಟುಂಬದ ಮುಂದಿನ ಗತಿ ಏನು ಎಂಬುದಾಗಿ ಸಭೆಯಲ್ಲಿ ಚರ್ಚಿಸಲಾಯಿತು.
ಇದಕ್ಕೆ ಒಪ್ಪಿಗೆ ದೊರೆತಿದ್ದು, ಮುಖ್ಯಮಂತ್ರಿಗಳ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ. ಸೋಂಕು ಹರಡದಂತೆ ತಡೆಗೆ ಹಾಗು ಬಡ ಕುಟುಂಬದಲ್ಲಿ ಆತ್ಮಸ್ಥರ್ಯ ಮೂಡಿಸುವಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ವಸತಿ ಸಚಿವ ಸೋಮಣ್ಣ ತಿಳಿಸಿದರು. ಪಾಲಿಕೆ ಆಯುಕ್ತರಾದ ಎನ್. ಮಂಜುನಾಥ್ ಪ್ರಸಾದ್ ಜೊತೆಗೆ ಸಂಸದ ಪಿ. ಸಿ. ಮೋಹನ್, ಸಚಿವ ವಿ. ಸೋಮಣ್ಣ, ಶಾಸಕ ಎನ್ ಎ ಹ್ಯಾರಿಸ್ ಮತ್ತು ಕೆಜೆ ಜಾರ್ಜ್ ನಡೆಸಿದ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕಾರ್ಮಿಕ ಇಲಾಖೆ ಅಥವಾ ಜಿಲ್ಲಾ ಆಡಳಿತದಿಂದ ಕಿಟ್ ಗಳನ್ನು ಪೂರೈಸಲಾಗುವುದು ಎಂದು ಹೇಳಿದ್ದಾರೆ.