(ನ್ಯೂಸ್ ಕಡಬ) newskadaba.com ಮಡಿಕೇರಿ, ಅ.05: ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗಿನ ತಲಕಾವೇರಿಯಲ್ಲಿ ಅ. 17ರಂದು ಬೆಳಗ್ಗೆ 7.03ಕ್ಕೆ ಕಾವೇರಿ ತೀರ್ಥ ಉದ್ಭವವಾಗಲಿದೆ. ಆದರೆ, ಈ ಅದ್ಭುತ ಕ್ಷಣವನ್ನು ವೀಕ್ಷಿಸಲು ಆಗಮಿಸುವ ಹೊರ ರಾಜ್ಯ ಹಾಗು ಜಿಲ್ಲೆಯ ಭಕ್ತರು ಕೋವಿಡ್ ಪರೀಕ್ಷೆಯ ದೃಢೀಕರಣ ಪತ್ರವನ್ನು ಜೊತೆಗೆ ತರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ತೀರ್ಥ ಉದ್ಭವದ ಸಂದರ್ಭ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಅಡ್ಡಿ, ಆತಂಕಗಳಿರುವುದಿಲ್ಲ. ಆದರೆ, ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಹೊರಗಿನಿಂದ ಬರುವ ಭಕ್ತರ ಮೇಲೆ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಭಕ್ತರಿಗೆ ಕೋವಿಡ್ ಪರೀಕ್ಷೆಯ ಪ್ರಮಾಣಪತ್ರ ನಿಯಮ ಅನ್ವಯವಾಗುವುದಿಲ್ಲ. ಆದರೆ ಯಾರಿಗೂ ತಲಕಾವೇರಿಯ ಕೊಳಕ್ಕೆ ಇಳಿಯಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಬದಲಿಗೆ ಕಾವೇರಿ ತೀರ್ಥವನ್ನು ಭಕ್ತರ ಮೇಲೆ ಪ್ರೋಕ್ಷಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.