(ನ್ಯೂಸ್ ಕಡಬ) newskadaba.com ಉಡುಪಿ,ಸೆ.22. ಅಕ್ರಮ ಕಸಾಯಿಖಾನೆಗೆ ಸಾಗಿಸಲೆಂದು ಹೋರಿಯೊಂದನ್ನು ಟೆಂಪೋದೊಳಗೆ ತುಂಬಿಸುವಾಗ ಒದ್ದಾಡಿದ ಕಾರಣಕ್ಕಾಗಿ ತಲವಾರಿನಿಂದ ಕಡಿದು ತೀವ್ರ ಗಾಯಗೊಳಿಸಿದ ನೀಚ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಎಂ.ಐ.ಸಿ ಬಳಿ ಹೋರಿಯೊಂದು ಮಾರಕಾಯುಧಗಳಿಂದ ಕಡಿದ ರೀತಿಯಲ್ಲಿ ತೀವ್ರ ಸ್ವರೂಪದ ಗಾಯಗಳೊಂದಿಗೆ ಅಸ್ವಸ್ಥ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದನ್ನು ಕಂಡು ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಪರಿಸರದ ನಿವಾಸಿಗಳು ಹೋರಿಗೆ ಔಷಧೋಪಚಾರ ಮಾಡಿದ್ದಾರೆ. ಆದರೆ ಹೋರಿಯು ಚಿಂತಾಜನಕ ಸ್ಥಿತಿಗೆ ತಲುಪಿದಾಗ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿ ಹೋರಿಯನ್ನು ರಕ್ಷಿಸುವಂತೆ ಫೋನ್ ಕರೆ ಮೂಲಕ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ನಿತ್ಯಾನಂದ ಹಾಗೂ ವಿನಯಚಂದ್ರ ಎಂಬವರು ಹೋರಿಯ ರಕ್ಷಣೆಗೆ ಮುಂದಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳ ನೆರವಿನೊಂದಿಗೆ ಬ್ರಹ್ಮಾವರದ ನೀಲಾವರ ಗೋ ಶಾಲೆಗೆ ರವಾನಿಸಲಾಗಿದೆ. ಡಾ. ಪ್ರಶಾಂತ್ ಹೋರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದು, ಉಡುಪಿ ಅಗ್ನಿ ಶಾಮಕ ದಳ ಹಾಗೂ ಸಾರ್ವಜನಿಕರು ಗೋಶಾಲೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ.