(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.22. ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಕಾರ್ಯಕ್ರಮ ಒಂದರಲ್ಲಿ ಇಬ್ಬರು ಕಲಾವಿದರು ಚುಂಬಿಸಿದ ದೃಶ್ಯ ಈಗ ವಿವಾದಕ್ಕೆ ಕಾರಣವಾಗಿದೆ.
ಬಂಟ್ವಾಳ ತಾಲೂಕಿನ ವಗೆನಾಡು ಸುಬ್ರಾಯ ದೇವಸ್ಥಾನದಲ್ಲಿ ಕಳೆದ ಸೆ.16 ರಂದು ಯಕ್ಷಗಾನ ವೈಭವ ನಡೆದಿತ್ತು. ತೆಂಕುತಿಟ್ಟಿನ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಈ ಯಕ್ಷಗಾನ ನಾಟ್ಯ ವೈಭವಕ್ಕೆ ಭಾಗವತರಾಗಿದ್ದರು. ಈಗ ಶೃಂಗಾರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ.
ಕರಾವಳಿಯ ಹೆಮ್ಮೆಯ ಸಂಸ್ಕೃತಿ ಅಂತಾನೆ ಕರೆಯಲ್ಪಡುವ ಈ ಶ್ರೇಷ್ಠ ಕಲೆಯಲ್ಲಿ ಈ ರೀತಿಯ ಅಸಂಬದ್ಧ ವರ್ತನೆ ಸಲ್ಲ ಅಂತ ಕಲಾ ಆರಾಧಕರು ವಿರೋಧಿಸಿದ್ದಾರೆ. ಅಲ್ಲದೇ ಶೃಂಗಾರ ಸನ್ನಿವೇಶದಲ್ಲಿ ಸಿನಿಮಾ ಶೈಲಿಯ ಚುಂಬನ ಸರಿ ಅಲ್ಲ ಎಂದು ವಾದಿಸಿದ್ದಾರೆ.