(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.27: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗೀಕರಿಸಿರುವ ಕೃಷಿ ಸಂಬಂಧಿತ ಕಾನೂನುಗಳು ರೈತ ವಿರೋಧಿ ಎಂದು ಆರೋಪಿಸಿ ನಾಳೆ (ಸೋಮವಾರ) ಬಂದ್‌ಗೆ ಕರೆ ನೀಡಿರುವ ದಕ್ಷಿಣ ಕನ್ನಡದ ವಿವಿಧ ರೈತ ಪರ ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ಅಂದು ಜಿಲ್ಲೆಯ ವಿವಿಧೆಡೆ ಪ್ರತಿಭಟನ ಸಭೆ, ಮೆರವಣಿಗೆ, ರಸ್ತೆ ತಡೆ ಚಳವಳಿ ನಡೆಯಲಿದೆ. ಮಂಗಳೂರಿನಲ್ಲಿ ಮಿನಿ ವಿಧಾನಸೌಧದ ಎದುರು ಕೆಲವು ರಾಜಕೀಯ ಪಕ್ಷಗಳ ಸಹಯೋಗದಲ್ಲಿ ಪ್ರತಿಭಟನ ಸಭೆ ಮತ್ತು ರಸ್ತೆ ತಡೆ ಚಳವಳಿ ಬೆಳಗ್ಗೆ 10ಕ್ಕೆ ನಡೆಯಲಿದೆ.
ರೈತ, ದಲಿತ, ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟದ ಆಶ್ರಯದಲ್ಲಿ ಬಂಟ್ವಾಳ ಮತ್ತು ಸುಳ್ಯದಲ್ಲಿ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಲಾಗುವುದು ಎಂದು ಹಸುರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದ್ದಾರೆ. ನಾಳೆ ಬಸ್ ಸಂಚಾರ ನಿಲ್ಲಿಸುವ ಬಗ್ಗೆ ಕೇಂದ್ರ ಕಚೇರಿಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಂದ್ ಕರೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೆ. 28ರಂದು ನಡೆಯಬೇಕಿದ್ದ ಎಸೆಸೆಲ್ಸಿ ಪೂರಕ ಪರೀಕ್ಷೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ನಿಗದಿಪಡಿಸಿದ್ದ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಿದೆ. ಪರಿಷ್ಕೃತ ದಿನಾಂಕವನ್ನು ತಿಳಿಸಲಾಗುವುದು. ಉಳಿದೆಲ್ಲ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.