(ನ್ಯೂಸ್ ಕಡಬ) newskadaba.com ತಲಕಾವೇರಿ, ಸೆ.23: ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ಬೆಳಿಗ್ಗೆ 7.03 ಗಂಟೆಗೆ ತೀರ್ಥೋದ್ಭವವಾಗಲಿದೆ. ತಲಕಾವೇರಿಯ ತೀರ್ಥೋದ್ಭವದ ಕುರಿತು ಶ್ರೀ ತಲಕಾವೇರಿ, ಭಾಗಮಂಡಲ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದೇ ಮುಂಬರುವ ಸೆಪ್ಟೆಂಬರ್ 26 ರಂದು ಬೆಳಗ್ಗೆ 8.31 ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕಲಾಗುವುದು.
ಅಕ್ಟೋಬರ್ 4 ರಂದು ಬೆಳಿಗ್ಗೆ 10.33 ಗಂಟೆಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.14 ರಂದು ಬೆಳಗ್ಗೆ 11.45 ಗಂಟೆಗೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸಲಾಗುವುದು. ಅ.14 ರಂದು ಸಾಯಂಕಾಲ 5.15 ನಿಮಿಷಕ್ಕೆ ಸಲ್ಲುವ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವುದು, ಅ.17 ರಂದು ಶನಿವಾರ ಬೆಳಿಗ್ಗೆ 7.03 ಗಂಟೆಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಶ್ರೀ ಮೂಲಕಾವೇರಿ ತೀರ್ಥೋದ್ಭವವಾಗಲಿದೆ ಎಂದು ತಿಳಿಸಿದ್ದಾರೆ. ತೀರ್ಥೋದ್ಭವದ ನಂತರ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಭಕ್ತಾದಿಗಳ ಪುಣ್ಯ ಸ್ನಾನಕ್ಕೆ ಅಗತ್ಯ ವ್ಯವಸ್ಥೆಯನ್ನು ದೇವಾಲಯದ ಆಡಳಿತ ಮಂಡಳಿ ಸ್ಥಳದಲ್ಲಿ ಕಲ್ಪಿಸಿರುತ್ತದೆ. ಕ್ಷೇತ್ರಕ್ಕೆ ಬರುವ ಭಕ್ತರು ತುಂಡುಡುಗೆ ತೊಡುವಂತಿಲ್ಲ. ಸ್ಲೀವ್ ಲೆಸ್, ಶಾರ್ಟ್ಸ್, ಪಾರದರ್ಶಕ ಬಟ್ಟೆ, ಬರ್ಮುಡಾ ತೊಟ್ಟು ಪುರುಷರು ಮಹಿಳೆಯರು ದೇಗುಲ ಪ್ರವೇಶಿಸುವಂತಿಲ್ಲ. ಇಂಥ ಉಡುಗೆ ತೊಟ್ಟವರನ್ನು ದೇವಾಲಯ ದ್ವಾರದಲ್ಲೇ ಸೆಕ್ಯೂರಿಟಿ ಗಾರ್ಡ್ ತಡೆಯುತ್ತಾರೆ.