(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.20, ಇತ್ತೀಚೆಗೆ ಭಟ್ಕಳ ಪುರಸಭೆಯ ಅಂಗಡಿ ಹರಾಜು ವೇಳೆ ನಡೆದ ಗಲಾಟೆಯಲ್ಲಿ ಮನನೊಂದು ಸೀಮೆಎಣ್ಣೆ ಸುರಿದುಕೊಂಡ ವ್ಯಾಪಾರಿ ರಾಮಚಂದ್ರ ಮನೆಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಂಗಳವಾರ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಉತ್ತರಕನ್ನಡ ಡಿಸಿ ಎಸ್ ಎಸ್ ನಕುಲ್ ಅವರಿಗೆ ಫೋನ್ ಮಾಡಿ ಪುರಸಭೆಯಲ್ಲಿ ಅಂಗಡಿ ಹರಾಜು ಸಂಬಂಧಿಸಿದಂತೆ ನಡೆದ ಗಲಭೆಯನ್ನು ಕಲ್ಲಡ್ಕ ಆಗಲು ಬಿಡಬೇಡಿ. ನಮ್ಮವರನ್ನು ಅನಾವಶ್ಯಕವಾಗಿ ಬಂಧಿಸಿದ್ರೆ ಸುಮ್ಮನಿರಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಟ್ಕಳ ಪುರಸಭೆಯು ಅಂಗಡಿ ಹರಾಜಿಗೆ ಮುಂದಾದಾಗ ಗಲಾಟೆ ನಡೆಯಿತು. ಈ ವೇಳೆ ವ್ಯಾಪಾರಿ ರಾಮಚಂದ್ರ ನಾಯ್ಕ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸೋದರ ಸುಟ್ಟುಗಾಯಗೊಂಡಿದ್ದಾನೆ.
ಭಟ್ಕಳ ಗಲಭೆ ಸಂಬಂಧ ಈಗಾಗಲೇ 66 ಜನ ಹಿಂದು ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ. 11 ಮಂದಿಯನ್ನು ಬಂಧಿಸಲಾಗಿದೆ. ಸುಮ್ಮನೆ ಗೂಂಡಾ ಕೇಸ್ ಹಾಕಿದ್ಯಾಕೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಸರ್ಕಾರ ಒಂದು ಸಮುದಾಯದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸದಿದ್ರೆ ಭಟ್ಕಳಕ್ಕೆ ಬಂದು ಪ್ರತಿಭಟಿಸೋದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.