(ನ್ಯೂಸ್ ಕಡಬ) newskadaba.com ತೊಡಿಕಾನ , ಸೆ.13: ತೊಡಿಕಾನ ಗ್ರಾಮದ ಪಂಜಿಕೋಡಿ ಎಂಬಲ್ಲಿ ಇಂದು ಮುಂಜಾನೆ ಭಾರಿ ಗಾತ್ರದ ಗೋಲಿ ಮರವೊಂದು ಬಿದ್ದು ಮನೆಯ ಮುಕ್ಕಾಲು ಭಾಗ ಕುಸಿದು ಬಿದ್ದಿದ್ದು, ಮನೆ ಮಂದಿಯೆಲ್ಲ ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ.
ಪಂಜಿಕೋಡಿ ಚಂದ್ರಶೇಖರ ಆಚಾರ್ಯ ಎಂಬವರ ಮನೆಗೆ ಭಾರಿ ಗಾತ್ರದ ಗೋಲಿ ಮರವೊಂದು ಬೆಳಿಗ್ಗೆ 8.15 ರ ಸಮಯಕ್ಕೆ ಬುಡ ಸಮೇತ ಉರುಳಿ ಬಿದ್ದಿದೆ. ಆ ಸಮಯದಲ್ಲಿ ಮನೆ ಮಂದಿಯೆಲ್ಲ ಒಳಗಿದ್ದರು. ಮರ ಬೀಳುವ ಶಬ್ದ ಕೇಳಿ ಚಂದ್ರಶೇಖರ ಆಚಾರ್ಯರು ಮನೆ ಮಂದಿಯನ್ನೆಲ್ಲಾ ಬೊಬ್ಬೆ ಹಾಕಿ ಮನೆಯಿಂದ ಹೊರಗೆ ಕಳುಹಿಸಿದರು. ಆತ ಮಲಗಿದ್ದ ಸುತ್ತ ಮುತ್ತ ಮರದ ರೆಂಬೆಗಳು, ಹಂಚು ಪುಡಿಪುಡಿಯಾಗಿ ಬಿದ್ದಿದ್ದು ಗೋಡೆಗೆ ಅಂಟಿಕೊಂಡು ಆತ ಮಲಗಿದ್ದರಿಂದ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಮನೆ ಮುಕ್ಕಾಲು ಭಾಗ ಹಾನಿಯಾಗಿದ್ದು, ಕೊಟ್ಟಿಗೆ ಹಾಗೂ ಆಚಾರಿ ಕೊಟ್ಯ ಸಂಪೂರ್ಣ ಕುಸಿದಿದೆ. ಸ್ಥಳಕ್ಕೆ ಕಂದಾಯ ಇಲಾಖೆ, ಪಂಚಾಯತ್, ಅರಣ್ಯ ಸಿಬ್ಬಂದಿಗಳು, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯರು ಮರ ತೆರವು ಮಾಡಲು ಸಹಕರಿಸಿ, ತಾತ್ಕಲಿಕವಾಗಿ ನೆಲೆಸಲು ಮನೆ ದುರಸ್ಥಿಗೆ ಸಹಕರಿಸಿದರು.