(ನ್ಯೂಸ್ ಕಡಬ) newskadaba.com ಕಡಬ, ಸೆ.19. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಜಮೀನಿನಲ್ಲಿರುವ ಕಟ್ಟಡದಲ್ಲಿ ಗ್ರಾಮಸ್ಥರ ಪ್ರಬಲ ವಿರೋಧದ ನಡುವೆಯೂ ಸೆಪ್ಟೆಂಬರ್ 11 ರಂದು ಪ್ರಾರಂಭಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಭಾನುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದ್ದು, ಮಂಗಳವಾರ ಕೂಡ ಮುಂದುವರಿದಿದೆ.
ಇಂದು ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಸಂಘಟನೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು ಜಮಾಯಿಸಿ ಮದ್ಯದಂಗಡಿಯ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.