(ನ್ಯೂಸ್ ಕಡಬ) newskadaba.com ಲಖನೌ, ಸೆ.12: ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಸಳೆ ಸಂರಕ್ಷಿತ ಪ್ರಾಣಿ ಎಂಬುದು ಗೊತ್ತಿರುವ ವಿಚಾರವೇ. ಆದರೆ ಒಂದಿಷ್ಟು ಹಳ್ಳಿ ಜನರಿಗೆ ಈ ವಿಚಾರ ಗೊತ್ತಿಲ್ಲ ಅನ್ನೋದಕ್ಕೆ ಲಖನೌನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಮೊಸಳೆಯನ್ನು ಹಿಡಿದಿಟ್ಟುಕೊಂಡ ಹಣ ಮಾಡಲು ಪ್ಲಾನ್ ಮಾಡಿದ್ದ ಹಳ್ಳಿ ಜನರಿಗೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಬುದ್ದಿ ಕಲಿಸಿದ್ದಾರೆ.
ಹೌದು, ಉತ್ತರ ಪ್ರದೇಶದ ಭಾಗದಲ್ಲಿ ಮಾನ್ಸೂನ್ ಮಳೆ ಸುರಿದಿದೆ. ಮಳೆಯಿಂದ ಪ್ರವಾಹ ಉಂಟಾಗಿದೆ. ಈ ವೇಳೆ ಮೊಸಳೆಯೊಂದು ಕೊಚ್ಚಿಕೊಂಡು ಬಂದು ಮಿದಾನಿಯಾ ಗ್ರಾಮದ ಕೆರೆ ಸೇರಿದೆ. ಇದನ್ನು ನೋಡಿದ್ದ ಗ್ರಾಮಸ್ಥರು 8 ಅಡಿ ಉದ್ದದ ಮೊಸಳೆಯನ್ನು ಹಿಡಿದು ಒತ್ತೆ ಇರಿಸಿಕೊಂಡಿದ್ದಾರೆ. ಈ ವಿಚಾರ ತಿಳಿದ ಅರಣ್ಯಾಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಗರಾಮಕ್ಕೆ ಹೋಗಿ ಮೊಸಳೆ ಬಿಡಿ ಎಂದು ಕೇಳಿದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಗ್ರಾಮಸ್ಥರು. ಸುಮಾರು 50 ಸಾವಿರ ಹಣ ನೀಡಿದರೆ ಮೊಸಳೆ ಬಿಡುವುದಾಗಿ ಹೇಳಿದ್ದಾರೆ. ಈ ವೇಳೆ ನೀವು ಮೊಸಳೆ ಬಿಡದೇ ಇದ್ದರೆ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನಂತರ ಮೊಸಳೆಯನ್ನು ಆ ಗ್ರಾಮಸ್ಥರು ಬಿಟ್ಟಿದ್ದಾರೆ. ನಂತರ ಮೊಸಳೆಯನ್ನು ಗಂಗಾ ನದಿಗೆ ಬಿಡಲಾಗಿದೆ.