ಸೆಪ್ಟೆಂಬರ್-5, ಶಿಕ್ಷಕರ ದಿನಾಚರಣೆ ➤‘ಗುರು’ ಎಂಬ ದೀಪಸ್ತಂಭ

(ನ್ಯೂಸ್ ಕಡಬ) newskadaba.com  ಸೆ. 05. ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದಿದೆ. ಇದೇನು ವಿಶೇಷ ಸಂಗತಿ ಅಲ್ಲ ಬಿಡಿ, ಪ್ರತಿ ವರ್ಷವೂ ಸೆಪ್ಟೆಂಬರ್-5 ಬಂದೇ ಬರುತ್ತದೆ. ಮತ್ತದೇ ಕಾಟಾಚಾರದ ಆಚರಣೆಗಳು. ಶಿಷ್ಟಾಚಾರಕ್ಕಾಗಿ ಶಿಕ್ಷಕರನ್ನು ಹಾಡಿ ಹೊಗಳುವುದು, ಸನ್ಮಾನ ಮಾಡುವುದು, ಹೂ ಹಾರ ಹಾಕಿ, ಹೊಗಳಿ ಹೊನ್ನ  ಶೂಲಕ್ಕೇರಿಸುವುದು. ಇವೆಲ್ಲಾ ಆಧುನಿಕ ಶಿಕ್ಷಣ ವ್ಯವಸ್ಥೆಯ ವ್ಯಾಪಾರೀಕರಣಗೊಂಡ ವಿಭಿನ್ನ ಮುಖಗಳು ಎಂದರೂ ತಪ್ಪಾಗಲಾರದು. ಈಗಿನ ಶಿಕ್ಷಣ ವ್ಯವಸ್ಥೆ ಬಹಳ ಭಿನ್ನವಾಗಿದೆ. ಶಿಕ್ಷಣ ಎನ್ನುವುದು ಒಂದು ಬಹುದೊಡ್ಡ ವ್ಯಾಪಾರವಾಗಿ ಮಾರ್ಪಟ್ಟಿದೆ. ಇವತ್ತು ಶಿಕ್ಷಣ ಸಂಸ್ಥೆ ನಡೆಸುವವರು ಯಶಸ್ವಿ ಉದ್ದಿಮೆದಾರರಾಗಿ  ವಿಜೃಂಬಿಸುತ್ತಿದ್ದಾರೆ.  ಹಿಂದಿನ  ಕಾಲದಲ್ಲಿ ಇದ್ದಂತಹಾ ಶಿಕ್ಷಣದ ಪಾವಿತ್ರ್ಯತೆ, ಶಿಕ್ಷಕರ ಮೇಲಿನ ಭಯ, ಭಕ್ತಿ, ಗೌರವ ಇವೆಲ್ಲವೂ ಮಾಯವಾಗಿದೆ. ಎಲ್ಲವೂ ನಾಟಕೀಯವಾಗಿ ಯಾಂತ್ರಿಕವಾಗಿ  ನಡೆಯುತ್ತಿದೆ. ಗುರು ಶಿಷ್ಯರ ಸಂಬಂಧ ‘ಮೌಲ್ಯಾಧಾರಿತ’ವಾಗಿ ಉಳಿಯದೆ ಮೌಲ್ಯ ಆಧಾರಿತವಾಗಿ ಬದಲಾಗಿರುವುದು ವಿಪರ್ಯಾಸವೇ ಸರಿ. ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಲೇಬೇಕಾದ  ಅನಿವಾರ್ಯ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ.

 

ಹಿನ್ನೆಲೆ ಏನು?

ನಮ್ಮ ದೇಶ ಕಂಡ ಅತ್ಯಂತ ಸಜ್ಜನ ಮತ್ತು ಸಂಭಾವಿತ ಶಿಕ್ಷಕರೂ ಮತ್ತು ನಮ್ಮ ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಶ್ರೀ ಸರ್ವೇಪಳ್ಳಿ ರಾಧಾಕೃಷ್ಣನ್  ಅವರ ಜನ್ಮದಿನವನ್ನು ಭಾರತದಾದ್ಯಂತ  1962 ರಿಂದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಆಷಾಢ ಮಾಸದ ಹುಣ್ಣಿಮೆಯಂದು ಗುರುಪೂರ್ಣಿಮಾ ದಿನ ಎಂದು ಆಚರಿಸಿ ಶಿಕ್ಷಕರಿಗೆ ಗೌರವಾರ್ಪಣೆ ಮಾಡುತ್ತಾರೆ.

ಈ ಪವಿತ್ರವಾದ ದಿನದಂದು ಎಲ್ಲರೂ ತಮ್ನನ್ನು ತಿದ್ದಿ, ತೀಡಿ, ಜೀವನದ ದಾರಿಯನ್ನು ತೋರಿಸಿದ ಗುರುಗಳನ್ನು ಸ್ಮರಿಸುತ್ತಾರೆ. ಒಬ್ಬ ಬಾಲಕನ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿರುತ್ತದೆ. ಗುರುಗಳು ಒಂದು ರೀತಿಯಲ್ಲಿ ದೀಪಸ್ತಂಭಗಳಿದ್ದಂತೆ, ತನ್ನ  ಶಿಷ್ಯರಿಗೆ ಬೆಳಕು ನೀಡಿ ದಾರಿ ತೋರಿ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಮಾರ್ಗದರ್ಶಕರಾಗಿ ಇರುತ್ತಾರೆ. ಹೀಗೆ ಒಂದು  ಸುಂದರ,  ಆರೋಗ್ಯವಂತ ಸದೃಢ ಸಮಾಜ ನಿರ್ಮಾಣದಲ್ಲಿ  ಶಿಕ್ಷಕರ ಪಾತ್ರ ಬಹಳ ಹಿರಿದಾಗಿದೆ. ಈ ಕಾರಣದಿಂದಲೇ  ನೆಲ್ಸನ್ ಮಂಡೇಲಾ  ಅವರು ಶಿಕ್ಷಕರು ಮತ್ತು ಶಿಕ್ಷಣದ ಬಗ್ಗೆ ಮಾತನಾಡುತ್ತಾ “ಶಿಕ್ಷಣ ಎನ್ನುವುದು ಬಹಳ  ಶಕ್ತಿಶಾಲಿ ಆಯುಧವಾಗಿದ್ದು, ಇಡೀ ಜಗತ್ತನ್ನೇ ಬದಲಾಯಿಸುವ ಶಕ್ತಿ ಅದಕ್ಕಿದೆ ಮತ್ತು ಆ ಶಕ್ತಿಯನ್ನು ನಿಸ್ವಾರ್ಥದಿಂದ ವಿದ್ಯಾರ್ಥಿಗಳಿಗೆ ಧಾರೆ ಎರೆಯುವವನೇ ನಿಜವಾದ ಶಿಕ್ಷಕ” ಎಂದು ಹೇಳಿರುತ್ತಾರೆ.  ಒಟ್ಟಿನಲ್ಲಿ ಶಿಕ್ಷಕರ ದಿನ ಎನ್ನುವುದು ಬಹುಶ: ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಮಜಲುಗಳನ್ನು ಸಿಂಹಾವಲೋಕನ ಮಾಡಿಕೊಂಡು ತಮ್ಮ ತಪ್ಪು ಒಪ್ಪುಗಳನ್ನು ವಿಮರ್ಶಿಸಿ ಮಗದೊಮ್ಮೆ ತಮ್ಮನ್ನು ತಮ್ಮ ವೃತ್ತಿಗೆ ಪುನರ್ ಸಮರ್ಪಿಸಿಕೊಳ್ಳುವ ದಿನ ಎಂದರೂ ತಪ್ಪಾಗಲಾರದು. ಇನ್ನು ಪ್ರತಿಯೊಬ್ಬ ವ್ಯಕ್ತಿಯೂ ಈ ದಿನದಂದು ತನಗೆ ಶಿಕ್ಷಣ ನೀಡಿ ತಿದ್ದಿ, ತೀಡಿ ಒಬ್ಬ ಪ್ರಜ್ಞಾವಂತ ನಾಗರಿಕನನ್ನಾಗಿ ಮಾಡಿದ ಶಿಕ್ಷಕರನ್ನು ಗೌರವದಿಂದ ಸ್ಮರಿಸಿಕೊಳ್ಳುವ ದಿನ ಎಂದರೆ ಅತಿಶಯೋಕ್ತಿಯಾಗದು. ವರ್ಷದಲ್ಲಿ ಒಮ್ಮೆಯಾದರೂ ತಮಗೆ ಶಿಕ್ಷಣ ನೀಡಿದ ಗುರುಗಳನ್ನು ನೆನಪಿಸದಿದ್ದಲ್ಲಿ ಅವು ಅಕ್ಷಮ್ಯ ಅಪರಾಧವಾದೀತು. ಒಬ್ಬ ವ್ಯಕ್ತಿ ಪ್ರಾಥಮಿಕ ಶಾಲೆಯಿಂದ  ಪದವೀಧರನಾಗುವವರೆಗೆ  ಸುಮಾರು 100 ರಿಂದ 150 ಶಿಕ್ಷಕರಿಂದ ಪಾಠ ಕಲಿತಿರುತ್ತಾರೆ. ಅವರಲ್ಲಿ  ಕನಿಷ್ಟ ಹತ್ತು ಮಂದಿ ಶಿಕ್ಷಕರನ್ನಾದರೂ ಸ್ಮರಿಸಲಾಗದಿದ್ದರೆ ಅದು ದೌರ್ಭಾಗ್ಯವೇ ಸರಿ.

Also Read  ಪತಿ ಪತ್ನಿ ನಡುವೆ ವಿರಸವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಎತ್ತ ಸಾಗುತ್ತಿದೆ ನಮ್ಮ ಶಿಕ್ಷಣ ವ್ಯವಸ್ಥೆ?

ಎಲ್ಲವೂ ವ್ಯಾಪಾರೀಕರಣವಾದಂತೆ ಶಿಕ್ಷಣ ಕ್ಷೇತ್ರವೂ ಗಣನೀಯವಾಗಿ ವ್ಯಾಪಾರೀಕರಣಗೊಂಡಿದೆ. ಶಿಕ್ಷಣ ಕ್ಷೇತ್ರ ತನ್ನ ಪಾವಿತ್ರತೆ ಕಳೆದುಕೊಂಡು, ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ ಮತ್ತು ಆತಂಕಕಾರಿಯಾಗಿ ಬೆಳೆಯುತ್ತಿದೆ.  ನೂರು ದಶಕಗಳ ಹಿಂದೆ ಇದ್ದಂತಹಾ ಶೈಕ್ಷಣಿಕ ವಾತಾವರಣ ಈಗ ಇಲ್ಲ. ಹಿಂದೆ ಶಿಕ್ಷಣ ಒಂದು ಪವಿತ್ರ ಮಾದ್ಯಮವಾಗಿ ಉಳಿದಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಎಲ್‍.ಕೆ.ಜಿ. ಗೆ ಸೇರಲು ಲಕ್ಷಗಟ್ಟಲೆ ಹಣ ನೀಡಬೇಕಾದ ಅನಿವಾರ್ಯತೆ ಇದೆ. ಮಗು ಹುಟ್ಟುವ ಮೊದಲೇ ಕ್ಯಾಪಿಟೇಷನ್ ಶುಲ್ಕ ನೀಡಿ  ಪ್ರತಿಷ್ಟಿತ ಸ್ಕೂಲ್‍ಗಳಲ್ಲಿ ಸೀಟು ಕಾದಿರಿಸುವ ವ್ಯವಸ್ಥೆಗೆ ನಾವಿಂದು ಬಂದು ತಲುಪಿದ್ದೇವೆ. ಸರ್ಕಾರಿ ಶಾಲೆಗಳು  ಯಾರಿಗೂ ಬೇಡವಾಗಿದೆ. ಪ್ರತಿಷ್ಠಿತ ಸ್ಕೂಲ್‍ಗಳಲ್ಲಿ ದುಬಾರಿ ಶುಲ್ಕ ತೆತ್ತು ಮಕ್ಕಳನ್ನು ಸೇರಿಸುವುದು ಹೆತ್ತವರಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಹಿಂದೆ ಒಂದೇ ಮನೆಯಲ್ಲಿ ನಾಲ್ವರು ಮಕ್ಕಳು ಇದ್ದು ಎಲ್ಲರೂ ಒಂದೇ ಸರ್ಕಾರಿ ಶಾಲೆಗೆ ಹೋಗುವ ವ್ಯವಸ್ಥೆ ಇತ್ತು. ಈಗ ಮನೆಗೊಂದೇ ಮಗು. ಆತನಿಗೆ ಪ್ರತಿಷ್ಠಿತ ಸ್ಕೂಲ್‍ಗಳಲ್ಲಿ ದುಬಾರಿ ಶುಲ್ಕ ತೆತ್ತು ಸೀಟು ಗಿಟ್ಟಿಸಿಕೊಳ್ಳುವುದೇ ಹೆತ್ತವರಿಗೆ ಪ್ರತಿಷ್ಠೆಯ ಪರಾಮಾವಧಿ. ಈಗಿನ ಶಾಲೆಗಳಲ್ಲಿ ಕಲಿತದ್ದಕ್ಕಿಂತ ಕಳೆದುಕೊಂಡದ್ದೇ ಜಾಸ್ತಿ. ಕಲಿಕೆಯನ್ನು ಸಂಭ್ರಮಿಸುವ ದಿನಗಳು ಈಗ ಇಲ್ಲ. ನಾವೀಗ ಫಲಿತಾಂಶವನ್ನು ಸಂಭ್ರಮಿಸಿ ರ್ಯಾಂಕ್‍ ಗಳನ್ನು ವೈಭವೀಕರಿಸಿ ಶಿಕ್ಷಣದ ಮೂಲ ಉದ್ದೇಶವನ್ನು ಹಾಳುಗೆಡವಿದ್ದೇವೆ. ಯಾವಾಗ ಶಿಕ್ಷಣ ಉದ್ಯಮವಾಗಿ ಬದಲಾಗಿ ಅಸಹ್ಯಕರ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಯಿತೋ ಆವಾಗಲೇ ವಿದ್ಯಾರ್ಥಿಗಳು ಆ ವ್ಯಾಪಾರ ವ್ಯವಸ್ಥೆಯ ಗ್ರಾಹಕರಾಗಿ ಬದಲಾಗಿಬಿಟ್ಟರು. ಎಲ್ಲಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಗಳಾಗಿ ಮಾರ್ಪಟ್ಟವು. ಹೀಗೆ ಪೈಪೋಟಿಗಿಳಿದ ವಿದ್ಯಾಸಂಸ್ಥೆಗಳಿಂದ ಶಿಕ್ಷಣದ ಮಾನ ಹರಾಜಾಗಿ  ಹೋಗಿತ್ತು. ಒಂದು ಸಂಸ್ಥೆಯ ಶಿಕ್ಷಣದ ಗುಣಮಟ್ಟವನ್ನು ಆ ಸಂಸ್ಥೆ ಪಡೆಯುವ ರ್ಯಾಂಕ್‍ಗಳ ಮೇಲೆ ನಿರ್ಣಯಿಸುವ ಅಸಹ್ಯಕರ ವಾತಾವರಣ ನಿರ್ಮಾಣವಾಯಿತು. ಇಂತಹಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಮೂಲ ಉದ್ದೇಶವನ್ನು ಮರೆತು ಬರೀ ರ್ಯಾಂಕ್ ಪಡೆಯುವ ಕಚ್ಚಾ ಸರಕಾಗಿ ಮಾರ್ಪಟ್ಟಿರುವುದು ಬಹಳ ಆಘಾತಕಾರಿ ವಿಚಾರ. ಇನ್ನಾದರೂ ಹೆತ್ತವರು ಮತ್ತು ಸರಕಾರ ಎಚ್ಚೆತ್ತುಕೊಳ್ಳಬೇಕು. ರ್ಯಾಂಕ್ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ತಕ್ಷಣವೇ ನಿಷೇಧಿಸಬೇಕು.  ಒಂದು ಶಿಕ್ಷಣ ಸಂಸ್ಥೆಯು ಸಾಮರ್ಥ್ಯವನ್ನು ಆ ಶಿಕ್ಷಣ ಸಂಸ್ಥೆ ಎಷ್ಟು ಪ್ರಜ್ಞಾವಂತ ನಾಗರಿಕರನ್ನು ಸ್ಪಷ್ಟಿಸಿದೆ ಎಂಬ ಮಾನದಂಡದಿಂದ ಅಳೆಯುವ ವ್ಯವಸ್ಥೆಗೆ ತೆರೆದುಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಒರೆಗೆ ಹಚ್ಚಿ ಆತನ ನೈಜ ಸಾಮಥ್ಯವನ್ನು ತೋರ್ಪಡಿಸುವ ವ್ಯವಸ್ಥೆಗೆ ನಾಂದಿ ಹಾಡಬೇಕು. ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಹೆಚ್ಚು ಗಮನ ನೀಡಬೇಕು. ಅದು ಬಿಟ್ಟು ಬರೀ ತಲೆಯೊಳಗೆ ಅನಗತ್ಯವಾದ ವಿಚಾರ ತುರುಕಿ, ರ್ಯಾಂಕ್ ಬರುವಂತೆ ಮಾಡಿ ಆ ವಿದ್ಯಾರ್ಥಿಯ ನೈಜ ಸಾಮರ್ಥ್ಯವನ್ನು ಕಡೆಗಣಿಸಿದರೆ ಅದಕ್ಕಿಂತ ದೊಡ್ಡದಾದ ದುರಂತ ಇನ್ನೊಂದಿಲ್ಲ. ಅಂತಹ ರ್ಯಾಂಕ್ ಪಡೆದ ವಿದ್ಯಾರ್ಥಿಗಳೇ ಮುಂದೆ ಜೀವನದ ಪರೀಕ್ಷೆಯಲ್ಲಿ ಹೀನಾಯವಾಗಿ ಸೋತು ಆತ್ಮಹತ್ಯೆಯಂತಹ ದುಡುಕು ನಿರ್ಧಾರದಲ್ಲಿ ದುರಂತ ಅಂತ್ಯ ಕಾಣುತ್ತಾರೆ. ಇನ್ನು ಉನ್ನತ ಶಿಕ್ಷಣದ ವ್ಯವಸ್ಥೆಯೂ ಹದಗೆಟ್ಟಿದೆ. ಇಲ್ಲಿ  ಕ್ಯಾಪಿಟೇಷನ್ ಹಾವಳಿ ಮುಗಿಲು ಮುಟ್ಟಿದೆ. ಅರ್ಹರಿಗೆ ಪ್ರತಿಭಾವಂತರಿಗೆ ಅವಕಾಶವಿಲ್ಲ. ದುಡ್ಡಿದ್ದವನೇ ದೊಡ್ಡಪ್ಪ. ಆತನಿಗೆ ಅರ್ಹತೆ ಇಲ್ಲದಿದ್ದರೂ ಅವಕಾಶಗಳು ಸದಾ ತೆರೆದಿರುತ್ತದೆ. ನಾಯಿ ಕೊಡೆಗಳಂತೆ ಪರಿಗಣಿತ ವಿಶ್ವವಿದ್ಯಾಲಯಗಳು ಹುಟ್ಟಿಕೊಂಡಿದೆ. ಅವರು ಮಾಡಿದ್ದೇ ಶಿಕ್ಷಣದ ವ್ಯವಸ್ಥೆ. ಅವರೇ ಪರೀಕ್ಷೆ ಮಾಡಿ ಅವರೇ ಫಲಿತಾಂಶ ನೀಡಿ ಬೆನ್ನುತಟ್ಟಿಕೊಳ್ಳುವ ವ್ಯವಸ್ಥೆ. ಇಲ್ಲಿ ಅತಿಯಾದ ವಿದ್ಯಾರ್ಥಿ ಸ್ನೇಹಿ ವಾತಾವರಣ. ಇಲ್ಲಿ ಶಿಕ್ಷಕರಿಗೆ ಸ್ವಾತಂತ್ರ್ಯವೇ ಇಲ್ಲ. ವಿದ್ಯಾರ್ಥಿಗಳನ್ನು ಬಯ್ಯುವಂತೇ ಇಲ್ಲ. ಅವರನ್ನೇ ತಲೆಮೇಲೆ ಹೊತ್ತು ಹಾಡಿ ಹೊಗಳುವ ಪರಿಸ್ಥಿತಿ. ಯಾವುದೇ ವಿದ್ಯಾರ್ಥಿಯನ್ನು ಶಿಕ್ಷಿಸಿದರೆ ಆ ಶಿಕ್ಷಕನ ಉದ್ಯೋಗಕ್ಕೆ ಕುತ್ತು ಬರುತ್ತದೆ. ಯಾಕೆಂದರೆ ಆ ವಿದ್ಯಾರ್ಥಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ದುಡ್ಡು ಸುರಿದು ದುಬಾರಿ ಸೀಟು ಗಿಟ್ಟಿಸಿರುತ್ತಾರೆ.  ಆತನನ್ನು ಪ್ರಶ್ನಿಸುವಂತೆಯೇ ಇಲ್ಲ. ಇಲ್ಲಿ ವಿದ್ಯಾರ್ಥಿಯೇ ಸರ್ವಾಧಿಕಾರಿ ಇಲ್ಲಿ ಶಿಕ್ಷಣ ಸಂಸ್ಥೆಯ ಒಡೆಯರು ಹೇಳಿದಂತೆ ಎಲ್ಲವೂ ತೆರೆಮರೆಯಲ್ಲಿ ನಡೆಯುತ್ತದೆ. ಶಿಕ್ಷಕರು ಒಂದು ರೀತಿಯ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬ ವ್ಯವಸ್ಥೆಯಲ್ಲಿ ಕೈಬಾಯಿ ಮುಚ್ಚಿಕೊಂಡು ತೆಪ್ಪಗಿರಲೇ ಬೇಕು.  ಯಾಕೆಂದರೆ ಇಂತಹ ಪರಿಗಣಿತ ವಿಶ್ವವಿದ್ಯಾಲಯಗಳು ನಡೆಯುವುದೇ ಕೋಟಿಗಟ್ಟಲೇ  ಕ್ಯಾಪಿಟೇಶನ್ ಶುಲ್ಕ ತೆತ್ತು ಬರುವ ವಿದ್ಯಾರ್ಥಿಗಳ ಕಾರಣದಿಂದ. ಇಂತಹ ವ್ಯವಸ್ಥೆಯಲ್ಲಿ ಶಿಕ್ಷಣ ನೀಡುವುದು ಶಿಕ್ಷಕರಿಗೆ ಶಿಕ್ಷೆಯೇ ಸರಿ. ಆದರೆ ವರ್ಷದಲ್ಲಿ ಒಮ್ಮೆ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯಂದು ಅಂತಹಾ ಹೊಂದಾಣಿಕೆ ಮಾಡಿಕೊಂಡ ಶಿಕ್ಷಕರಿಗೆ ಹೂ-ಹಾರ, ಫಲಪುಷ್ಪ ನೀಡಿ ಸನ್ಮಾನ ಮಾಡಿ ಗೌರವಿಸಲಾಗುತ್ತದೆ. ಇಂತಹ ವ್ಯವಸ್ಥೆಗೆ ತಿಲಾಂಜಲಿ ಇಡಲೇ ಬೇಕು.  ಇಲ್ಲವಾದಲ್ಲಿ ಶಿಕ್ಷಕರ ದಿನಾಚರಣೆಗೆ ಯಾವುದೇ ಅರ್ಥವಿರುವುದಿಲ್ಲ.

Also Read  ಮದುವೆಗೆ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ಕೊನೆ ಮಾತು

ಗುರು ಎಂದರೆ ನಮಗೆ ಕಲಿಸಿರಲೇ ಬೇಕು ಎಂದು ಅರ್ಥವಲ್ಲ. ಯಾರು ನಮ್ಮ ನಡವಳಿಕೆ, ಆಚಾರ-ವಿಚಾರ, ಸಂಸ್ಕಾರಗಳಿಂದ ಇತರರಿಗೆ ಮಾರ್ಗದರ್ಶಕರಾಗಿ ಆದರ್ಶಪ್ರಾಯರಾಗಿ ಬದುಕುತ್ತಾರೋ  ಅವರೇ ನಮ್ಮ ನಿಜವಾದ ಗುರು ಎನಿಸಿಕೊಳ್ಳುತ್ತಾರೆ. ‘ಗು’ ಎಂದರೆ ಅಜ್ಞಾನ ‘ರು’ ಎಂದರೆ ಹೋಗಲಾಡಿಸುವವನು. ಯಾರು ನಮ್ಮ ಮನಸ್ಸಿನ ಅಂಧಕಾರವನ್ನು ಮತ್ತು ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ಧಾರೆ ಎರೆಯುತ್ತಾರೋ ಅವರೇ ನಮ್ಮ ನಿಜವಾದ ಗುರು ಎನಿಸಿಕೊಳ್ಳುತ್ತಾರೆ.  ಗುರು ಎನ್ನುವ ಶಬ್ದಕ್ಕೆ ಶಿಕ್ಷಕ ಎಂಬ ಅರ್ಥವೂ ಇದೆ. ಹೆಚ್ಚಿನವರು ‘ಗುರು’ವನ್ನು ತಮ್ಮ ಶಿಕ್ಷಕರ ರೂಪದಲ್ಲಿ ಕಂಡುಕೊಳ್ಳಬಹುದು. “ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ, ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು”.

 

ಯಾರು ನಮ್ಮಲ್ಲಿನ ಅಜ್ಞಾನ ಎಂಬ  ಅಂಧಕಾರವನ್ನು ತಮ್ಮ ಜ್ಞಾನ ದೀವಿಗೆ ಮೂಲಕ ತೊಲಗಿಸಿ, ನಮ್ಮ ಕಣ್ಣು ತೆರೆಸಿ, ಬದುಕಲು ದಾರಿ ಮತ್ತು ಗುರಿ ತೋರಿಸುತ್ತಾರೋ ಅಂತಹ ಗುರುಗಳಿಗೆ ಸಾವಿರ ಸಾವಿರ ಪ್ರಣಾಮಗಳು. ಎಲ್ಲವೂ ವ್ಯಾಪರೀಕರಣವಾಗುತ್ತಿರುವ ಈ ವ್ಯಾವಹಾರಿಕ ಜಗತ್ತಿನಲ್ಲಿ  ಧಾವಂತದ ವೇಗದ ಬದುಕಿನ ಈ ಹೊತ್ತಿನಲ್ಲಿ  ಆಧುನಿಕತೆಯ ನೆಪದಲ್ಲಿ ತತ್ವ ಮೌಲ್ಯಗಳು ಮತ್ತು ಸಂಸ್ಕಾರಗಳು ವೇಗವಾಗಿ ಬದಲಾಗುತ್ತಿದೆ. ಜೀವನ ಶೈಲಿಯೂ ಬದಲಾಗುತ್ತದೆ. ಗುರು-ಶಿಷ್ಯರ ಸಂಬಂಧವೂ ಬದಲಾಗುತ್ತಿರುತ್ತದೆ. ಹಿಂದಿನ ಕಾಲದಲ್ಲಿದ್ದ  ಗುರುಕುಲ ಪದ್ಧತಿ ನಿರ್ನಾಮವಾಗಿದೆ. ಗುರು ಶಿಷ್ಯರ ಸಂಬಂಧ ‘ಮೌಲ್ಯ’ ಆಧಾರಿತ ಸಂಬಂಧವಾಗಿ ಪರಿವರ್ತನೆಯಾಗಿದೆ. ಹಿಂದಿನ ಕಾಲದಲ್ಲಿ ಇದ್ದಂತಹ ಭಯ ಭಕ್ತಿ, ಪ್ರೀತಿ, ಗೌರವಗಳು ಕೇವಲ ಹೊರಜಗತ್ತಿಗೆ ತೋರಿಸುವ ತೋರಿಕೆಯ ಢಾಂಭಿಕತೆಯ ವಸ್ತುವಾಗಿ ಪರಿವರ್ತನೆಯಾಗಿದೆ. ಈ ನಿಟ್ಟಿನಲ್ಲಿ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಮಾಜ ತಮ್ಮನ್ನು ತಾವು ಪುನರ್‍ ವಿಮರ್ಶಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿಂದು ಬಂದು ನಿಂತಿದ್ದೇವೆ. ಶಿಕ್ಷಕರ ದಿನಾಚರಣೆ ಕೇವಲ ಒಂದು ದಿನದ ಸಾಂಕೇತಿಕ ಆಚರಣೆಯಾಗಿ ಉಳಿಯಬಾರದು. ಶಿಕ್ಷಣದ ನಿಜವಾದ ಮೌಲ್ಯಗಳನ್ನು ಅಳವಡಿಸಿಕೊಂಡು ಗುರು ಶಿಷ್ಯರ ಸಂಬಂಧವನ್ನು ಪುನರ್ ಪ್ರತಿಷ್ಟಾಪಿಸಬೇಕಾದ ಅನಿವಾರ್ಯತೆ ಇದೆ. ಹಾಗಾದರೆ ಮಾತ್ರ ಶಿಕ್ಷಕರ ದಿನಾಚರಣೆಯು ಹೆಚ್ಚು ಅರ್ಥಪೂರ್ಣವಾದೀತು. ನಾವು ನಂಬಿದ ತತ್ವ, ಮೌಲ್ಯ, ಆಚಾರ, ವಿಚಾರ, ಮಂಥನಗಳನ್ನು ಅಳವಡಿಸಿಕೊಂಡು ನಮ್ಮ ಶಿಕ್ಷಕರು ಹೇಳಿದ ವಿಚಾರಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಗುರುವೇ ಪರಮ ಸತ್ಯ. ಗುರುವೇ ಸರ್ವಸ್ವ ಎಂದು ಪರಿಗಣಿಸಿದಲ್ಲಿ ಮಾತ್ರ ನಮ್ಮ ಏಳಿಗೆ ಸಾಧ್ಯವಿದೆ. ವಿದ್ಯಾರ್ಥಿಗಳ ಒಳಿತಿಗಾಗಿ ಬಿಂಬಿಸುವ, ಚಿಂತಿಸುವ, ಮಂಥಿಸುವ, ಸರ್ವತ್ಯಾಗ ಮಾಡುವ ಶಿಕ್ಷಕರು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಅಂತಹ ಗುರುವರೇಣ್ಯರಿಗೆ ಪರಮ ಪೂಜ್ಯ ಗುರುಗಳಿಗೆ ಮತ್ತು ಗಂಧದ ಕೊರಡಿನಂತ ನಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ತಮ್ಮ ಜೀವನವನ್ನು ತೇಯುವ ಎಲ್ಲ ಗುರು ಪರಂಪರೆಗೆ ನಮೋ ನಮ:. ಎಲ್ಲ ಶಿಕ್ಷಕ ಬಂಧುಗಳಿಗೆ ಈ ದಿನದಂದು ಶುಭ ಹಾರೈಸೋಣ. ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಹಿತ ಅಡಗಿದೆ. ‘ಹಿಂದೆ ಗುರು ಇರಲಿ, ಮುಂದೆ ಗುರಿ ಇರಲಿ’ ಎಂಬ ಕುವೆಂಪು ರವರ ಉಕ್ತಿಯಂತೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಂಡಲ್ಲಿ  ಆರೋಗ್ಯಪೂರ್ಣ ಸಮಾಜ ನಿರ್ಮಾಣ ಆಗಬಹುದು.

Also Read  ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

ಜಾತಿ, ಧರ್ಮ, ಕುಲಗೋತ್ರ, ಮತಪಂಥ, ಮೇಲುಕೀಲು, ಹೆಣ್ಣು-ಗಂಡು, ಹೀಗೆ ಎಲ್ಲವನ್ನು ಮೀರಿದ್ದು ‘ಗುರುಪಂಥ’ ಹಾಗೂ ‘ಗುರುಪರಂಪರೆ’ ಅಂತಹಾ ಗುರುಪರಂಪರೆಗೆ ಸೇರಿದೆಲ್ಲಾ ಗುರುವರೇಣ್ಯರಿಗೆ ಸಾವಿರ ಸಾವಿರ ಸಾಷ್ಟಾಂಗ ಪ್ರಣಾಮಗಳು.

 

  ಡಾ|| ಮುರಲೀ  ಮೋಹನಚೂಂತಾರು

error: Content is protected !!
Scroll to Top