(ನ್ಯೂಸ್ ಕಡಬ) newskadaba.com ವಿಜಯಪುರ, ಸೆ.05: ಮನುಷ್ಯರು ಸೀಮಂತ ಕಾರ್ಯಕ್ರಮ ಆಯೋಜಿಸುವುದು ಸಾಮಾನ್ಯ. ಹಸುಗಳಿಗೂ ಗೋವು ಪ್ರೀಯರು ಸೀಮಂತ ಮಾಡಿದ ಉದಾಹರಣೆಗಳುಂಟು. ಆದರೆ, ಅತೀ ನಂಬಿಕಸ್ತ ಪ್ರಾಣಿಗೆ ಸೀಮಂತ ನಡೆಸುವ ಮೂಲಕ ಬಸವನಾಡಿನ ಜನ ಗಮನ ಸೆಳೆದಿದ್ದಾರೆ.
ವಿಜಯಪುರದ ಕನ್ನಡ ಪರ ಹೋರಾಟಗಾರ ಪ್ರಕಾಶ ಕುಂಬಾರ ತಮ್ಮ ಮನೆಯ ಸಾಕು ನಾಯಿ ಸೋನು ಹೆಸರಿನ ಶ್ವಾನಕ್ಕೆ ಸೀಮಂತ ನಡೆಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಪ್ರಕಾಶ ಕುಂಬಾರ ಸುಮಾರು ಆರು ತಿಂಗಳ ಹಿಂದೆ ಪೊಮೆರೇನಿಯನ್ ತಳಿಯ ಶ್ವಾನವನ್ನು ತಂದಿದ್ದರು. ತಂದಾಗಲೇ ಇದು ಗರ್ಭ ಧರಿಸಿತ್ತು. ಈಗ ಆ ಶ್ವಾನ ತುಂಬು ಗರ್ಭಿಣಿಯಾಗಿದೆ. ಮುಂದಿನ 15 ದಿನಗಳಲ್ಲಿ ಮರಿಗಳಿಗೆ ಜನ್ಮ ನೀಡಲಿದೆ. ಈ ಹಿನ್ನೆಲೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ತೀರ್ಮಾನಿಸಿದರು.
ಅದರಂತೆ ಪ್ರಕಾಶ ಕುಂಬಾರ ಹೆಂಡತಿ ವಿಜಯಲಕ್ಷ್ಮಿ ಜೊತೆ ಸೇರಿ ಈ ರೀತಿ ಸೀಮಂತ ಕಾರ್ಯಕ್ರಮ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.ಸೀಮಂತ ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಶ್ವಾನದ ತಂದೆಯ ಸ್ಥಾನದಲ್ಲಿ ನಿಂತು ನಾಯಿಗೆ ಉಡುಗೊರೆ ನೀಡಿ ಸಂಭ್ರಮಿಸಿದರು. ಪ್ರಕಾಶ ಕುಂಬಾರ ಅವರ ತಾಯಿ ಮಹಾದೇವಿ ಕುಂಬಾರ ಸೀಮಂತ ಕಾರ್ಯಕ್ರಮದಲ್ಲಿ ಹೇಳಲಾಗುವ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಮನುಷ್ಯರು ಮಾಡುವಂತೆ ಈ ಕಾರ್ಯಕ್ರಮದಲ್ಲಿಯೂ ಜನ ಸೇರಿದ್ದರು. ಶ್ವಾನವನ್ನು ಸ್ವಚ್ಛಗೊಳಿಸಿ ಅದಕ್ಕೆ ಬಳೆಗಳನ್ನು ತೊಡಿಸಿ ಹೂವಿನ ಹಾರವನ್ನೂ ಹಾಕಿದ್ದರು. ಅಲ್ಲದೇ, ಶ್ವಾನದ ತಂದೆಯ ಸ್ಥಾನ ವಹಿಸಿದ್ದ ಮಲ್ಲಿಕಾರ್ಜುನ ಭೃಂಗಿಮಠ ಮಗಳಿಗೆ ಉಡುಗೊರೆ ನೀಡುವಂತೆ ಸೀರೆ, ಬಂಗಾರ, ಬೆಳ್ಳಿ, ಬಳೆಗಳು, ದಂಡಿ, ಹೂವನ್ನು ನೀಡುವ ಮೂಲಕ ಉತ್ತಮ ಸಂದೇಶ ಸಾರಿದರು.