(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 04: ಮಹಿಳೆಯೋರ್ವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ ವಿವಾಹಿತ, ಮಾಜಿ ಪುರಸಭಾ ಸದಸ್ಯನನ್ನು ಸೆ.4ರ ಶುಕ್ರವಾರದಂದು ಬಂಧಿಸಲಾಗಿದೆ.
ಸಂದೀಪ ಪೂಜಾರಿ ಕೋಡಿ ಎನ್ನುವ ವ್ಯಕ್ತಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮಹಿಳೆಯೋರ್ವರ ಪತಿ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟಿದ್ದು ಅವರ ಉದ್ಯೋಗವನ್ನು ಅವರ ಪತ್ನಿಗೆ ಕೊಡಿಸುವುದಾಗಿ ಹಾಗೂ ಮದುವೆಯಾಗುತ್ತೇನೆಂದು ಭರವಸೆ ಕೊಟ್ಟು ಆ ಮಹಿಳೆಯಿಂದ ಹಣವನ್ನು ಪಡೆದಿದ್ದನು. ನಂತರ ಸಂದೀಪ ಪೂಜಾರಿ ಆಕೆಗೆ ಬೈದು ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಆ ಮಹಿಳೆ ತನ್ನ ಗೆಳತಿಯಲ್ಲಿ ಮೂಲಕ ಆಪಾದಿತನಲ್ಲಿ ವಿಚಾರಿಸಿದಾಗ ಅವರಿಗೂ ಸಹ ಅವಾಚ್ಯವಾಗಿ ಅವಹೇಳನ ಮಾಡಿದ್ದಾನೆ ಎನ್ನಲಾಗಿದೆ. ಸೆ.1ರಂದು ಸಂದೀಪ ಪೂಜಾರಿ ಮೊಬೈಲ್ ನಂಬರ್‌ನಿಂದ ಆತನ ಪತ್ನಿ ವಂಚನೆಗೊಳಗಾದ ಮಹಿಳೆಗೆ ಕರೆ ಮಾಡಿ ನನ್ನ ಗಂಡನ ಬಗ್ಗೆ ಮಾತನಾಡದೆ ಸುಮ್ಮನಿರಬೇಕು ಎಂದು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದಳು. ಈ ಬಗ್ಗೆ ಆ ಮಹಿಳೆ ಸಂದೀಪ ಪೂಜಾರಿ ತನಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಹಣವನ್ನೆಲ್ಲಾ ಮೋಸದಿಂದ ಪಡೆದುಕೊಂಡಿದ್ದು ವಿವಾಹವಾಗುತ್ತೇನೆ ಎಂದು ಸುಳ್ಳು ಹೇಳಿ ವಂಚಿಸಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.