(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 04: ಮಾರುತಿ ಓಮಿನಿಯಲ್ಲಿ ಕೇರಳದ ಅಕ್ರಮವಾಗಿ ಕರು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸಿದ ಪುತ್ತೂರು ಪೊಲೀಸರು, ವಾಹನದಲ್ಲಿ ಕರುವಿನ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದ ಕರುವನ್ನು ರಕ್ಷಣೆ ಮಾಡಿದ್ದಾರೆ. ಪುತ್ತೂರು ತಾಲೂಕು ನರಿಮೊಗರು ಸಮೀಪದ ಪುರುಷರಕಟ್ಟೆಯಲ್ಲಿ ಘಟನೆ ನಡೆದಿದೆ.
ಪುತ್ತೂರು ನಗರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಕೇರಳ ನೋಂದಾಯಿತ ಓಮಿನಿ ಮಾರುತಿ ಕಾರನ್ನು ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಗುರುವಾರ ಸಂಜೆ 6.45 ರ ಸುಮಾರಿಗೆ ತಡೆದು ನಿಲ್ಲಿಸಿದ್ದು ಈ ಸಂದರ್ಭ ಕರುವನ್ನು ಕಟ್ಟಿ ಅಕ್ರಮವಾಗಿ ವಾಹನದಲ್ಲಿ ಸಾಗಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ.ಬಂಧಿತ ಆರೋಪಿಗಳನ್ನು ಕಾಸರಗೋಡು ನಿವಾಸಿಗಳಾದ ಶಿವಪ್ರಸಾದ್ ಭಟ್ ಕೆ (52) ಮತ್ತು ಚಂದ್ರನ್ ಟಿ (34) ಎಂದು ಗುರುತಿಸಲಾಗಿದೆ. ಬಂಧಿತರಿಂದ ಜಾನುವಾರು ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಹಿಂದು ಜಾಗರಣಾ ವೇದಿಕೆ ಸಂಘಟನೆಯ ಮಾಹಿತಿಯಂತೆ ಪೊಲೀಸರು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿ ನರಿಮೊಗರು ಕಡೆಯಿಂದ ಬರುತ್ತಿರುವ ಮಾಹಿತಿ ಓಮ್ನಿಯನ್ನು ತಡೆದು ತಪಾಸಣೆ ನಡೆಸಿದಾಗ ಓಮ್ನಿಯ ಹಿಂದಿನ ಸೀಟ್ ನಲ್ಲಿ ಒಂದೂವರೆ ವರ್ಷದ ಕರುವೊಂದನ್ನು ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಗೋ ಸಾಗಾಟಕ್ಕೆ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.