(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. 2020-21 ನೇ ಸಾಲಿಗೆ ರಾಷ್ಟ್ರ ಮಟ್ಟದ ಶೌರ್ಯ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು, ಸಾಮಾಜಿಕ ಪಿಡುಗುಗಳನ್ನು ನಿವಾರಣೆಗಾಗಿ ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ನಿಸ್ವಾರ್ಥ ಸೇವೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಶೌರ್ಯ ಪ್ರದರ್ಶಿಸಿದ ಅವಧಿ 2019 ಜುಲೈ 1 ರಿಂದ 2020 ಜೂನ್ 30 ರೊಳಗೆ ಆಗಿರಬೇಕು. ಈ ಬಗ್ಗೆ ಆರಕ್ಷಕ ಇಲಾಖೆಯಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿ(FIR), ಛಾಯಚಿತ್ರ, ಜನ್ಮ ದಿನಾಂಕ ದಾಖಲೆ (ಆಯಾ ವ್ಯಾಪ್ತಿಯ ಪ್ರಾಂಶುಪಾಲಕರು/ಮುಖ್ಯೋಪಾಧ್ಯಾಯರು ಮತ್ತು ಠಾಣಾಧಿಕಾರಿಗಳಿಂದ ದೃಢೀಕರಿಸಿದ) ಹಾಗೂ ಶೌರ್ಯ ಪ್ರದರ್ಶಿಸಿದ ಬಗೆಗಿನ ಪತ್ರಿಕಾ ವರದಿ ಇನ್ನಿತರ ಪೂರಕ ದಾಖಲೆಗಳನ್ನು ಅರ್ಜಿ ಜೊತೆಗೆ ಲಗತ್ತಿಸಬೇಕು. ಅರ್ಜಿಗಳನ್ನು ಆಂಗ್ಲ ಭಾಷೆಯಲ್ಲಿಯೇ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಅರ್ಜಿಯನ್ನು ಸೆಪ್ಟೆಂಬರ್ 30 ರೊಳಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ, ಉರ್ವ ಸ್ಟೋರ್, ಮಂಗಳೂರು-575006 ಇಲ್ಲಿಗೆ ಸಲ್ಲಿಸಬೇಕು. ಅರ್ಜಿ ವೆಬ್‍ಸೈಟ್ ವಿಳಾಸ www.iccw.co.in ನಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2451254 ಸಂಪರ್ಕಿಸಲು ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಕಟಣೆ ತಿಳಿಸಿದೆ.