ನಾರಾಯಣ ಗುರುಗಳ ಆದರ್ಶ ಇಂದಿಗೂ ಸ್ಪೂರ್ತಿ – ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. ಸಮಾಜದಲ್ಲಿರುವ ನ್ಯೂನತೆ, ಅಸಮಾನತೆಯ ವಿರುದ್ಧ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳು ಇಂದಿಗೂ ಸ್ಪೂರ್ತಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.


ಅಂದು ಸಮಾಜದಲ್ಲಿ ಬೇರೂರಿದ ಜಾತಿಬೇದ  ಎನ್ನುವ ಕೆಟ್ಟ ವ್ಯವಸ್ಥೆ, ಅಸಮತೋಲನ, ಜೊತೆಗೆ ಶೋಷಣೆಯ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಸಮಾನತೆಯನ್ನು ಮೂಡಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ, ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ.    ಪ್ರಸ್ತುತ ದಿನಗಳಲ್ಲಿ ಅಧಿಕಾರಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳನ್ನು ಮನನ ಮಾಡಿಕೊಂಡು ಸಮಾಜದಲ್ಲಿರುವ ಅಸಮಾನತನೆಯನ್ನು ಹೋಗಲಾಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು  ಎಂದರು. ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು ಮಾತನಾಡಿ, ಕೊವೀಡ್‍ನಿಂದಾಗಿ ಜನರ ಜೀವನ ಶೈಲಿ ಬದಲಾಗಿದ್ದು, ಇಡೀ ಜಗತ್ತೇ ಸರಳತೆಯ ಕಡೆಗೆ ಸಾಗುತ್ತಿದೆ, ಬ್ರಹ್ಮಶ್ರೀ ನಾರಾಯಣ ಗುರುಗಳು ಹಲವು ವರ್ಷಗಳ ಹಿಂದೆಯೇ ಸರಳತೆಯ ತತ್ವವನ್ನು ಪ್ರತಿಪಾದಿಸಿದ್ದರು. ಸಮಾಜದಲ್ಲಿರುವ ಜಾತಿ ಬೇಧವನ್ನು ಹೋಗಲಾಡಿಸುವಲ್ಲಿ ತಮ್ಮ ಬದುಕಿನುದ್ದಕ್ಕೂ ಹೋರಾಡಿದ ಮಹಾನ್ ಗುರುಗಳು. ಶಿಕ್ಷಣ ಒಂದೇ ಸಮಾಜದಲ್ಲಿ ಗೌರವ ತಂದುಕೊಡಬಲ್ಲದು ಎಂದು ಸಾರಿದ ಅವರು, 1912 ರಲ್ಲಿ ಮಂಗಳೂರಿನ ಗೋಕರ್ಣ ಕ್ಷೇತ್ರದ ಶಿಲಾನ್ಯಾಸವನ್ನು ನೆರವೇರಿಸಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಎಂ. ಜೆ. ರೂಪಾ ಮತ್ತಿತರರು ಉಪಸ್ಥಿತರಿದ್ಧರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.

Also Read  ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಭಟ್ ಮೇಲಿನ ಹಲ್ಲೆಗೆ ಶ್ರೀರಾಮ ಸೇನೆ ಖಂಡನೆ

error: Content is protected !!
Scroll to Top