(ನ್ಯೂಸ್ ಕಡಬ) newskadaba.com ಬಂಟ್ವಾಳ. ಸೆ.02: ಮಳೆಗಾಲದಲ್ಲಿ ಗುಡ್ಡ ಕುಸಿದು ಸಾವು ನೋವು ಸಂಭವಿಸುತ್ತಿರುವ ಘಟನೆಗಳು ನಡೆಯುತ್ತಿರುವುದನ್ನು ನಾವು ಪದೇ ಪದೇ ಕೇಳುತ್ತಲೇ ಇದ್ದೇವೆ. ಇಲ್ಲೊಂದು ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಅಗೆಯಲಾಗಿದ್ದು, ಪ್ರಸ್ತುತ ಗುಡ್ಡಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಮರಗಳೂ ಇರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ.
ಬಿ.ಸಿ.ರೋಡು-ಪುಂಜಾಲಕಟ್ಟೆ 19.85 ಕಿ.ಮೀ.ಹೆದ್ದಾರಿ ಅಭಿವೃದ್ಧಿಗಾಗಿ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಭೂಸ್ವಾಧೀನ ಪಡಿಸಲಾದ ಪ್ರದೇಶಗಳನ್ನು ಅಗೆದು ರಸ್ತೆ ನಿರ್ಮಿಸಲಾಗಿದೆ. ರಸ್ತೆ ಸಾಗುವ ನಾವೂರು ಗ್ರಾಮದ ಬಡಗುಂಡಿ ಪ್ರದೇಶಗಳಲ್ಲಿ ಹೆದ್ದಾರಿ ಒಂದು ಭಾಗವು ಗುಡ್ಡ ಪ್ರದೇಶವಾಗಿರುವುದರಿಂದ ಭೂಸ್ವಾಧೀನದ ವೇಳೆ ಸುಮಾರು 50 ಅಡಿ ಎತ್ತರದ ಗುಡ್ಡಗಳು ನಿರ್ಮಾಣವಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಮರಗಳು ಕೂಡ ಇದ್ದು, ಒಂದು ವೇಳೆ ಮಳೆಯ ಕಾರಣದಿಂದ ಮರಗಳು ಸಹಿತ ಗುಡ್ಡ ಕುಸಿದರೆ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳಬಹುದು. ಹೆದ್ದಾರಿಯಲ್ಲಿ ಧರ್ಮಸ್ಥಳ ಭಾಗಕ್ಕೆ ತೆರಳುವ ಬಸ್ಸುಗಳು ಸೇರಿದಂತೆ ಸಾವಿರಾರು ವಾಹನಗಳು ರಾತ್ರಿ-ಹಗಲು ಸಂಚರಿಸುತ್ತಿದ್ದು, ಒಂದು ವೇಳೆ ವಾಹನಗಳು ಸಾಗುವ ವೇಳೆ ಈ ಗುಡ್ಡ ಕುಸಿತವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ತೆರಳುಗೊಳಿಸಲಾದ ವಿದ್ಯುತ್ ಕಂಬಗಳನ್ನು ಗುಡ್ಡ ಅಗೆದ ಬಳಿಕ ಸರತಿಯಲ್ಲಿ ಹಾಕಲಾಗಿದ್ದು, ಪ್ರಸ್ತುತ ಕಂಬಗಳು ಗುಡ್ಡದ ಬುಡದಲ್ಲೇ ಇವೆ. ಗುಡ್ಡ ಮಣ್ಣು ಕುಸಿದರೆ ಈ ವಿದ್ಯುತ್ ಕಂಬಗಳು, ತಂತಿಗಳ ಮೇಲೆಯೇ ಬೀಳಲಿದ್ದು, ಪರಿಣಾಮ ಲಕ್ಷಾಂತರ ರೂ.ನಷ್ಟ ಸಂಭವಿಸಲಿದೆ. ಗುಡ್ಡದಿಂದ ಕನಿಷ್ಟ ಒಂದು ಮರ ತಂತಿಯ ಮೇಲೆ ಬಿದ್ದರೂ, ಹತ್ತಾರು ಕಂಬಗಳು ಧರೆಗುರುಳುವ ಸಾಧ್ಯತೆ ಹೆಚ್ಚಿದೆ.