(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ. ಸೆ.02: ರಾಜ್ಯದ ಹಿಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳನ್ನು ಪುನರಾರಂಭಿಸಲು ಶರತ್ತು ಬದ್ದ ಅನುಮತಿಯನ್ನು ನೀಡಿ ಸರಕಾರ ಸುತ್ತೋಲೆ ಹೊರಡಿಸಿದೆ. ದೇವಸ್ಥಾನಗಳಲ್ಲಿ ನಡೆಸಬಹುದಾದ ಸೇವೆಗಳ ಮಟ್ಟಿ ಮಾಡಲು ಆಯಾಯ ದೇವಸ್ಥಾನಗಳ ಇಒ,ಆಡಳಿತಧಿಕಾರಿ ಹಾಗೂ ಅನುವಂಶಿಕ ಮೊಕ್ತೇಸರರಿಗೆ ಅಧಿಕಾರ ನೀಡಲಾಗಿದೆ.
ಕಳೆದ ದಿನ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖಾ ಆಯುಕ್ತರ ಕಾರ್ಯಾಲಯದಿಂದ ಸುತ್ತೋಲೆ ಹೊರಡಿಸಲಾಗಿದೆ. ಕಳೆದದ ದಿನದಿಂದಲೇ ಅನ್ವಯವಾಗುವಂತೆ ವೈಯಕ್ತಿಕ ಅಂತರ ಕಾಪಾಡಿ,ಸ್ಯಾನಿಟೈಸ್ ಮಾಡುವುದು ಮತ್ತು ಕೇಂದ್ರ- ರಾಜ್ಯ ಸರಕಾರಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜವಾಬ್ದಾರಿಯೊಂದಿಗೆ ಅನುಮತಿ ನೀಡಲಾಗಿದೆ. ಆಯಾ ದೇವಾಲಯಗಳಿಗೆ ಅನುಗುಣವಾಗಿ ಈ ಹಿಂದೆ ನಡೆಸುತ್ತಿದ್ಗಸೇವೆಗಳನ್ನು ಭಕ್ತರ ಸಂಖ್ಯೆ ಹಾಗೂ ಸ್ಥಳಾವಕಾಶದ ಲಭ್ಯತೆ ಆಧಾರದ ಮೇಲೆ ನಡೆಸಬಹುದಾದ ಸೇವೆಗಳ ಸಂಖ್ಯೆಗಳನ್ನು ದೇವಾಲಯಗಳ ಕಾರ್ಯನಿರ್ವಾಹಕಾಧಿಕಾರಿಗಳು/ಆಡಳಿತಧಿಕಾರಿಗಳು ಅಥವಾ ಅನುವಂಶಿಕ ಮೊಕ್ತೇಸರರು ನಿಗದಿಪಡಿಸಬೇಕು.ಕೋವಿಡ್ -19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊರಡಿಸಿರುವ ಮಾರ್ಗಸೂಚಿಗಳಂತೆ ವೈಯಕ್ತಿಕ ಅಂತರ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು. ಅಲ್ಲದೇ ಆಯಾ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳು ಹೊರಡಿಸಿರುವ ಆದೇಶಗಳನ್ನು ಪಾಲಿಸಬೇಕು. ದೇವಾಲಯಗಳಲ್ಲಿ ವೈಯಕ್ತಿಕ ಅಂತರ ಮತ್ತು ಸ್ಯಾನಿಟೈಸರ್ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಉಪವಿಭಾಗಾಧಿಕಾರಿಗಳು ಅಥವಾ ಧಾರ್ಮಿಕ ದತ್ತಿ ಇಲಾಖಾ ಸಹಾಯಕ ಆಯುಕ್ತರು ಖಾತರಿಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.