(ನ್ಯೂಸ್ ಕಡಬ) ಮಂಗಳೂರು, ಸೆ. ೦೧. ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಓಣಂ ಹಬ್ಬವನ್ನು ವಿವಿಧ ಹೂವಿನ ಪೂಕಲಂʼನ್ನು ರಚಿಸುವ ಮೂಲಕ ಆಚರಿಸಲಾಯಿತು. ಓಣಂʼನ್ನು ಹಳೆಯ ಪದ್ದತಿಯೊಂದಿಗೆ ಆಚರಿಸಲಾಗುತ್ತದೆ. ಓಣಂʼನ್ನು ಆಚರಿಸಲು ಕಾರಣ ಏನೆಂದರೆ ಅದು ಉತ್ತಮ ಸುಗ್ಗಿಯನ್ನು ಕೊಡುವ ಸಮಯ. ಇದರಿಂದಾಗಿ ಸಮೃದ್ಧಿ ಮತ್ತು ಸಂತೋಷವು ಜನರಿಗೆ ಲಭಿಸುತ್ತದೆ. ಓಣಂ ಸಲುವಾಗಿ ಸಂಪ್ರದಾಯದಂತೆ ಪೂಕಲಂನ್ನು ರಚಿಸುತ್ತಾರೆ. ಸ್ಥಳೀಯವಾಗಿ ಲಭ್ಯವಿರುವ ಮಾರಿಗೋಲ್ಡ್ ಕ್ರೈಸಾಂಥೆಮಮ್ ನಿಂದ ಹಿಡಿದು ಇತರೆ ಹೂವುಗಳನ್ನು ಕಿತ್ತು ವಿವಿಧ ಆಕಾರಗಳಲ್ಲಿ ಪೂಕಲಂನ್ನು ಜೋಡಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಶಕ್ತಿ ಸಂಸ್ಥೆಯಲ್ಲಿ ಆಚರಿಸಲಾದ ಓಣಂʼನ್ನು ಉದ್ದೇಶಿಸಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ಡಾ| ಕೆ. ಸಿ ನಾಯಕ್ ಮಾತನಾಡಿ, ತಮ್ಮ ಎಲ್ಲ ಶಕ್ತಿ ಸಂಸ್ಥೆಯ ಉದ್ಯೋಗಿಗಳಿಗೆ ಸಮೃದ್ಧಿ ಹಾಗೂ ಆರೋಗ್ಯವನ್ನು ದೇವರು ಕರುಣಿಸಲಿ ಈ ಮೂಲಕ ಉತ್ತಮ ಭವಿಷ್ಯ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸಂಜೀತ್ ನಾಯಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಉಪಸ್ಥಿತರಿದ್ದರು.