(ನ್ಯೂಸ್ ಕಡಬ) newskadaba.com ಕಡಬ, ಆ. 31 : ಕಡಬ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ನೆಲ್ಯಾಡಿ ಪೇಟೆಗೆ ಸಂಬಂಧಿಸಿ, ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಜನಸಂಚಾರವಿಲ್ಲದೆ ಭೂತ ಬಂಗಲೆಯಂತಾಗಿದೆ. ಇಲ್ಲಿ ಎಲ್ಲ ಸರಕಾರಿ ಬಸ್ ಗಳು ಪೇಟೆಯಲ್ಲೇ ನಿಂತು ಸಂಚಾರಿಸುವುದರಿಂದ ಈ ಬಸ್ಸು ನಿಲ್ದಾಣ ಬಿಕೋ ಎನ್ನುತ್ತಿದೆ.
ನೆಲ್ಯಾಡಿ ಬಸ್ ನಿಲ್ದಾಣಕ್ಕೆ 1 ಎಕ್ರೆ ಜಾಗವಿದೆ. ಬಸ್ಸುಗಳು ತಂಗಲು ಸಾಕಷ್ಟು ಸ್ಥಳಾವಕಾಶವೂ ಇದೆ. ಸರಕಾರಿ ಬಸ್ಸುಗಳು ಇಲ್ಲಿಗೆ ಬರುವಂತೆ ಮಾಡುವ ಉದ್ದೇಶದಿಂದ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಎರಡು ವರ್ಷಗಳಿಂದ ಈ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರನ್ನು ನಿಯೋಜಿಸಿದೆ. ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯ ಡಾಮರು ಕಿತ್ತು ಹೋಗಿ ಸಂಚಾರಕ್ಕೆ ತೊಂದರೆಯಾಗುವಂತಿದೆ. ಆದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ವಿರಳವಾಗಿರುವುದರಿಂದ ರಾತ್ರಿ ಹೊತ್ತು ಕಾವಲುಗಾರರ ವ್ಯವಸ್ಥೆಯು ಇಲ್ಲದೇ ಇಲ್ಲಿ ಅನ್ಯ ಚಟುವಟಿಕೆ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಸ್ಥಳೀಯರು ಮುಜುಗರ ಅನುಭವಿಸುವಂತಾಗಿದೆ. ಜನರ ತೆರಿಗೆಯ ಹಣದಿಂದ ನಿರ್ಮಿಸಲಾಗಿರುವ ಈ ಬಸ್ಸು ನಿಲ್ದಾಣ ಕಟ್ಟಡ ಬಣ್ಣ ಕಳೆದುಕೊಂಡು ಕಿಟಕಿ ಗಾಜುಗಳು ಒಡೆದುಹೋಗಿ, ಗೋಡೆಯಲ್ಲಿ ಅಲ್ಲಲ್ಲಿ ಪಾಚಿಕಟ್ಟಿ ಹಾಳು ಕೊಂಪೆಯಂತೆ ಕಾಣುತ್ತಿದೆ. ಇಲ್ಲಿ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಸಹಿತ ಒಂದಿಷ್ಟು ನವೀಕರಣ ಕಾಮಗಾರಿಯನ್ನು ನಡೆಸಿ ಪ್ರಯಾಣಿಕರಿಗೆ ಯೋಗ್ಯವಾಗುವಂತೆ ಮಾಡಲು ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯು ಈ ಬಗ್ಗೆ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.