(ನ್ಯೂಸ್ ಕಡಬ) newskadaba.com ಮಂಗಳೂರು, ಆ. 33: ತೀವ್ರ ಅಸ್ವಸ್ಥಗೊಂಡಿದ್ದ ಇಲ್ಲಿನ ಕೊಣಾಜೆಯಲ್ಲಿ ನೆಲೆಸಿರುವ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ (ಕೆಎಸ್‌ಆರ್‌ಪಿ) ಏಳನೇ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿರುವ ರವಿ ರೈ (51) ಅವರ ಜೀವವನ್ನು ರಕ್ಷಣೆ ಮಾಡಲು ಬೆಂಗಳೂರಿನಿಂದ ಮಂಗಳೂರಿಗೆ ರಾತ್ರೋರಾತ್ರಿ ಪ್ಲಾಸ್ಲಾ ತಂದು ಚಿಕಿತ್ಸೆ ನೀಡಿದ ಘಟನೆ ನಡೆದಿದೆ.
ಮೂತ್ರಕೋಶದಲ್ಲಿ ಸಮಸ್ಯೆಯಿದ್ದ ರೈ ಅವರಿಗೆ ತೀವ್ರ ಜ್ವರವೂ ಇತ್ತು. ಅವರನ್ನು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮೂತ್ರಪಿಂಡ ಮತ್ತು ಲಿವರ್ ಹಾನಿಗೊಳಗಾದ ಕಾರಣ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಸಂದರ್ಭದಲ್ಲಿ ವೈದ್ಯರು ಪ್ಲಾಸ್ಮಾ ದೊರೆತರೆ ಕಾನ್‌ಸ್ಟೆಬಲ್ ಅವರನ್ನು ರಕ್ಷಣೆ ಮಾಡಬಹುದು ಎಂದು ಹೇಳಿದ್ದು ಕೂಡಲೇ ಕೆಎಸ್‌ಆರ್‌ಪಿ ಕಮಾಂಡೆಂಟ್ ಯುವಕುಮಾರ್ ಅವರು ಈ ಮಾಹಿತಿಯನ್ನು ಬೆಂಗಳೂರಿನ ಕೆಎಸ್‌ಆರ್‌ಪಿ ಹೆಚ್ಚುವರಿ ಮಹಾನಿರ್ದೇಶಕರಿಗೆ (ಎಡಿಜಿಪಿ) ತಿಳಿಸಿದರು. ಎಡಿಜಿಪಿ ಕೂಡಲೇ ಈ ವಿಚಾರವಾಗಿ ಕಾರ್ಯ ಪ್ರವೃತ್ತರಾಗಿದ್ದು ಕೆಎಸ್‌ಆರ್‌ಪಿ ನಾಲ್ಕನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ರಾಜು ಕೊಲ್ಹಾಪುರಿ ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದ್ದಾರೆ. ಕೊಲ್ಹಾಪುರಿ ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದರು. ಕೂಡಲೇ ರಾತ್ರೋರಾತ್ರಿ ಬೆಂಗಳೂರಿನಲ್ಲಿ ಸಂಗ್ರಹಿಸಿದ ಈ ಪ್ಲಾಸ್ಮಾವನ್ನು ಕೆಲವೇ ಗಂಟೆಗಳಲ್ಲಿ ಪ್ಲಾಸ್ಮಾದೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ತರಲಾಗಿದೆ. ರವಿ ರೈ ಅವರು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ಅವರು ಬದುಕುಳಿಯುತ್ತಿರಲಿಲ್ಲ ಎಂದು ಹೇಳಿರುವ ರವಿ ರೈ ಅವರು ಹಲವಾರು ಜನರ ಪ್ರಯತ್ನದಿಂದ ಇಂದು ನಾನು ಬದುಕುಳಿದಿದ್ದೇನೆ ಎಂದು ಹೇಳಿದ್ದಾರೆ.