(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು. ಆ,30: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು, ಎರಡು ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಗೆದ್ದಲಹಳ್ಳಿಯಲ್ಲಿ ನಡೆದಿದೆ.

ಶಿವಮೊಗ್ಗ ಕಡೆಯಿಂದ ಹಾಸನ ಕಡೆ ಹೋಗುತ್ತಿದ್ದ ಯೂನಿಕಾರ್ನ್ ಬೈಕ್ ಹಾಗೂ ಬೆಂಗಳೂರು ಕಡೆಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಪಲ್ಸರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಯೂನಿಕಾರ್ನ್ ಬೈಕಿನಲ್ಲಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಸವಾರನನ್ನ ಹಾಸನ ಮೂಲದ 35 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ. ಬೈಕ್ಗಳು ಡಿಕ್ಕಿಯಾದ ರಭಸಕ್ಕೆ ಮಂಜುನಾಥ್ ಅಪಘಾತದ ಸ್ಥಳದಿಂದ ಸುಮಾರು 15 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾನೆ.ಪಲ್ಸರ್ ಬೈಕ್ನಲ್ಲಿದ್ದ ಇಬ್ಬರು ಯುವಕರಲ್ಲಿ ಸಂಜಯ್ ಎಂಬುವನ ಸ್ಥಿತಿ ಗಂಭೀರವಾಗಿದ್ದು, ಮತ್ತೋರ್ವ ಸವಾರ ಗೌತಮ್ಗೆ ಸಣ್ಣಪುಟ್ಟ ಗಾಯಗಳಾಗಿವೆ.












