ಆರೋಗ್ಯ ಇಲಾಖೆಯಿಂದ ಪರಿಷ್ಕೃತ ಸುತ್ತೋಲೆ ➤ ಅಂತರ್‌ ರಾಜ್ಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಅಗತ್ಯವಿಲ್ಲ…

(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,25 : ರಾಜ್ಯಕ್ಕೆ ಆಗಮಿಸುವ ಅಂತರ್‌ ರಾಜ್ಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಹಿಂದಿನ ಎಲ್ಲ ಸುತ್ತೋಲೆಗಳನ್ನು ರದ್ದುಗೊಳಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ.ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಪರಿಷ್ಕೃತ ಸುತ್ತೋಲೆ ಅನ್ವಯ, ಕೋವಿಡ್-19 ರೋಗ ಲಕ್ಷಣಗಳಿಲ್ಲದಿದ್ದಲ್ಲಿ 14 ದಿನಗಳ ಕ್ವಾರಂಟೈನ್ ಅಗತ್ಯವಿರುವುದಿಲ್ಲ, ಸೇವಾ ಸಿಂಧು ಆಪ್‌ನಲ್ಲಿ ರಿಜಿಸ್ಟರ್ ಅಗತ್ಯವಿಲ್ಲ. ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಆದರೆ, ಅವರು ರಾಜ್ಯಕ್ಕಾಗಮಿಸಿದ ದಿನದಿಂದ 14 ದಿನಗಳವರೆಗೆ ಕೊರೋನಾ ರೋಗದ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ಗಂಟಲುನೋವು, ಉಸಿರಾಟದ ತೊಂದರೆ ಇತ್ಯಾದಿಗಳ ಮೇಲೆ ಸ್ವಯಂ-ನಿಗಾ ವಹಿಸಬೇಕು. ಈ ವೇಳೆಯಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ಸಮಾಲೋಚನೆ ಪಡೆಯಬೇಕು ಅಥವಾ ಆಪ್ತಮಿತ್ರ ಸಹಾಯವಾಣಿ 14410 ಗೆ ಕರೆ ಮಾಡಬೇಕಾಗಿದೆ.

ಅದೇ ರೀತಿ ಕೋವಿಡ್-19 ಲಕ್ಷಣಗಳಿದ್ದಲ್ಲಿ ತಕ್ಷಣವೇ ಸ್ವಯಂ ಪ್ರತ್ಯೇಕವಾಗಿರಬೇಕು ಮತ್ತು ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯುವುದು ಅಥವಾ ಆಪ್ತಮಿತ್ರ ಸಹಾಯವಾಣಿ 14410 ಗೆ ಕರೆ ಮಾಡಬೇಕು. ರೋಗವನ್ನು ತಡೆಗಟ್ಟಲು ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, 2 ಮೀಟರ್ ದೈಹಿಕ ಅಂತರ ಕಾಪಾಡಬೇಕು, ಸಾಬೂನಿನಿಂದ ಆಗಾಗ ಕೈ ತೊಳೆಯುತ್ತಿರಬೇಕು, ಕೈಗೆ ಸ್ಯಾನಿಟೈಸರ್ ಬಳುವುದು, ಕೆಮ್ಮುವಾಗ ಶಿಷ್ಟಾಚಾರ ಪಾಲಿಸುವುದು ಇತ್ಯಾದಿ, ಮುನ್ನಚ್ಚರಿಕಾ ಕ್ರಮಗಳನ್ನು ಸಾರ್ವಜನಿಕ ಹಾಗೂ ಕೆಲಸದ ಸ್ಥಳದಲ್ಲಿ ಪಾಲಿಸಬೇಕು ಎಂದು ಹೇಳಲಾಗಿದೆ.ಅಲ್ಲದೆ, ಇತರೆ ರಾಜ್ಯಗಳಿಂದ ಬರುವವರಿಗೆ ರೋಗ ಲಕ್ಷಣದ ಸ್ವಯಂ ವರದಿ ಮಾಡುವಿಕೆಯ ಮಹತ್ವ, ಸ್ವಯಂ ಪ್ರತ್ಯೇಕತೆ ಹಾಗೂ ರೋಗ ಲಕ್ಷಣಗಳುಳ್ಳ ವ್ಯಕ್ತಿಗಳು ಕೋವಿಡ್-19 ಪರೀಕ್ಷೆ ಮಾಡಿಸುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು, ಬಿಬಿಎಂಪಿ ಸೂಕ್ತ ಐಇಸಿ ಅಭಿಯಾನ ಆಯೋಜಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.ಈ ಪರಿಷ್ಕೃತ ಸುತ್ತೋಲೆ ಅನ್ವಯ ಕರ್ನಾಟಕಕ್ಕೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸುವ ವ್ಯಾಪಾರಿಗಳು, ವಿದ್ಯಾರ್ಥಿಗಳು ಕೆಲಸಕ್ಕೆ ಬರುವ ಕಾರ್ಮಿಕರು, ಸಾರಿಗೆ ಮಧ್ಯಂತರ ಪ್ರಯಾಣಿಕರು ಇತರರಿಗೆ ಅನ್ವಯಿಸುತ್ತದೆ. ರಾಜ್ಯದಲ್ಲಿ ಉಳಿದುಕೊಳ್ಳುವ ಅವಧಿಯನ್ನು ಲೆಕ್ಕಿಸದೇ, ಎಲ್ಲ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು ಇದನ್ನು ತ್ವರಿತವಾಗಿ ಯಾವುದೇ ಬದಲಾವಣೆಯಿಲ್ಲದೆ ಜಾರಿಗೆ ತರಲು ಸೂಚಿಸಲಾಗಿದೆ.

Also Read  ಎಸ್‍ಎಸ್‍ಎಲ್‍ಸಿ ಫಲಿತಾಂಶ - ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಗೆ ಶೇ.80 ಫಲಿತಾಂಶ

 

 

 

error: Content is protected !!
Scroll to Top