(ನ್ಯೂಸ್ ಕಡಬ) ಮಂಗಳೂರು, ಆ. 24. ಮರವೂರು ಕಿಂಡಿ ಅಣೆಕಟ್ಟಿನಿಂದ ಕಂದಾವರ ಭಾಗದಲ್ಲಿ ಕೃಷಿ ಮತ್ತು ಜನವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿರುವ ಸಮಸ್ಯೆಗೆ ಪರಿಹಾರ ರೂಪಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಸೋಮವಾರ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮರವೂರು ಅಣೆಕಟ್ಟಿನ ಹಿನ್ನೀರಿನ ಪ್ರದೇಶದ ಆಸುಪಾಸಿನಲ್ಲಿರುವ ಕಂದಾವರ, ಅದ್ಯಪಾಡಿ ಪ್ರದೇಶಗಳ ನೂರಾರು ಎಕರೆ ಕೃಷಿ ಭೂಮಿಗಳಲ್ಲಿ ಕಳೆದ ಕೆಲವು ವರ್ಷಗಳಿಂದ ನದಿ ನೀರು ನಿಲ್ಲುತ್ತಿರುವ ಬಗ್ಗೆ ಸ್ಥಳೀಯರಿಂದ ಹಲವು ಅಹವಾಲುಗಳು ಬಂದಿವೆ. ಈ ನಿಟ್ಟಿನಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲು ತಾಂತ್ರಿಕ ನಿಪುಣರು, ಇಂಜಿನಿಯರಿಂಗ್ ಅಧಿಕಾರಿಗಳು ಹಾಗೂ ಸ್ಥಳೀಯರನ್ನೊಳಗೊಂಡ ಸಮಿತಿಯನ್ನು ಜಿಲ್ಲಾಧಿಕಾರಿಗಳು ರಚಿಸಿ, ಈ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಯೋಜನಾ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಲಿದೆ ಎಂದು ಸಚಿವರು ತಿಳಿಸಿದರು.
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಮರವೂರು ಡ್ಯಾಂ ನಿಂದಾಗಿ ಕಂದಾವರ ಪ್ರದೇಶದ ನೂರಾರು ಎಕರೆ ಕೃಷಿ ಪ್ರದೇಶಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಅಡಿಕೆ, ತೆಂಗು ಸೇರಿದಂತೆ ತೋಟಗಳಿಗೆ ನೀರು ನುಗ್ಗುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರ ನರೇಂದ್ರ, ಎನ್ಐಟಿಕೆ ತಂತ್ರಜ್ಞ ಮಯ್ಯ, ಕಂದಾವರ ಸ್ಥಳೀಯ ಪ್ರತಿನಿಧಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.