ವಿಟಮಿನ್ – ಇ – ಡಾ| ಮುರಲೀ ಮೋಹನ್ ಚೂಂತಾರು

ವಿಟಮಿನ್- ಇ ದೇಹಕ್ಕೆ ಅತೀ ಅಗತ್ಯವಾದ ವಿಟಮಿನ್ ಆಗಿದ್ದು, ದೇಹದಲ್ಲಿನ ಜೀವಕೋಶಗಳನ್ನು ರಕ್ಷಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುತ್ತದೆ. ವಿಟಮಿನ್-ಇ ಅತ್ಯಂತ ಶಕ್ತಿಶಾಲಿಯಾದ ‘ಆಂಟಿಆಕ್ಸಿಡೆಂಟ್’ ರೀತಿಯಲ್ಲಿ ಕೆಲಸ ಮಾಡಿ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ. ಇದರ ಜೊತೆಗೆ ದೇಹದ ರಕ್ಷಣಾ ವ್ಯವಸ್ಥೆಯನ್ನು ಸಧೃಢಗೊಳಿಸುವ ಕೆಲಸವನ್ನು ಮಾಡುತ್ತದೆ. ಮಾರಕವಾದ ಧೀರ್ಘಕಾಲಿಕ ರೋಗಗಳಾದ ಶ್ವಾಸಕೋಶದ ಕಾಯಿಲೆಗಳು, ಹೃದಯದ ಕಾಯಿಲೆಗಳು ಮತ್ತು ಕ್ಯಾನ್ಸರ್ ರೋಗಗಳನ್ನು ತಡೆಯುವಲ್ಲಿ ಮುಖ್ಯ ಭೂಮಿಕೆ ವಹಿಸುತ್ತದೆ. ವಿಟಮಿನ್ ಎ,ಡಿ,ಸಿ ಮತ್ತು ಇ ಕೊಬ್ಬಿನಲ್ಲಿ ಮಾತ್ರ ಕರಗುತ್ತದೆ ಮತ್ತು ನೀರಿನಲ್ಲಿ ಕರಗುವುದಿಲ್ಲ. ಈ ಕಾರಣದಿಂದ ದೇಹಕ್ಕೆ ಅಗತ್ಯಕ್ಕಿಂತ ಜಾಸ್ತಿ ವಿಟಮಿನ್ -ಇ ತೆಗೆದುಕೊಳ್ಳಬಾರದು. ನಾವು ಸೇವಿಸಿದ ಆಹಾರದಲ್ಲಿರುವ ಹೆಚ್ಚಿರುವ ವಿಟಮಿನ್ ಇ ಯನ್ನು ದೇಹ ಯಕೃತ್ತಿನಲ್ಲಿ ಶೇಖರಿಸಿ ಇಡುತ್ತದೆ ಮತ್ತು ಅಗತ್ಯವಿದ್ದಾಗ ಬಳಸಿಕೊಳ್ಳುತ್ತದೆ. ದಿನವೊಂದಕ್ಕೆ ಒಬ್ಬ ಆರೋಗ್ಯವಂತ ವಯಸ್ಕ ಪುರುಷರಿಗೆ ಮತ್ತು ಮಹಿಳೆಗೆ 15 mg ನಷ್ಟು ವಿಟಮಿನ್ ಇ ಅಗತ್ಯವಿರುತ್ತದೆ. ಆದರೆ ಹಾಲುಣಿಸುವ ಮತ್ತು ಗರ್ಭಸ್ಥ ಮಹಿಳೆಯರಿಗೆ ದಿನವೊಂದಕ್ಕೆ 20 mg ವಿಟಮಿನ್ ಇ ಅವಶ್ಯಕತೆ ಇರುತ್ತದೆ. ದಿನವೊಂದರಲ್ಲಿ 100 mg ಗಿಂತ ಜಾಸ್ತಿ ವಿಟಮಿನ್ ಇ ಸೇವಿಸಬಾರದು. ಅಗತ್ಯಕ್ಕಿಂತ ಜಾಸ್ತಿ ಸೇವಿಸಿದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಅತೀ ಕಡಿಮೆ ಕೊಬ್ಬು ಇರುವ ಆಹಾರ ಮತ್ತು ಕೊಬ್ಬು ರಹಿತ ಆಹಾರ ಸೇವಿಸುವವರಿಗೆ ಮಾತ್ರ ವಿಟಮಿನ್ ಇ ಕೊರತೆ ಉಂಟಾಗಬಹುದು. ಅದೇ ರೀತಿ ಅನ್ನನಾಳದ ಸಮಸ್ಯೆ ಇರುವವರಲ್ಲಿ ವಿಟಮಿನ್ ಇ ಹೀರಿಕೊಳ್ಳಲು ಸಾದ್ಯವಾಗದಿದ್ದಾಗಲೂ ವಿಟಮಿನ್ ಇ ಕೊರತೆ ಉಂಟಾಗಬಹುದು. ನಾವು ತಿನ್ನುವ ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಇ ಹೇರಳವಾಗಿ ಇರುವುದರಿಂದ ವಿಟಮಿನ್ ಇ ಮಾತ್ರೆ ತಿನ್ನುವ ಅವಶ್ಯಕತೆ ಬರುವುದು ಬಹಳ ವಿರಳ. ನಮ್ಮ ದಿನನಿತ್ಯದ ಆಹಾರದಲ್ಲಿ ಆಂಟಿಆಕ್ಸಿಡೆಂಟ್ ಹೇರಳವಾಗಿರುವ ಹಸಿ ತರಕಾರಿ, ಸೊಪ್ಪು ತರಕಾರಿ, ಹಣ್ಣು ಹಂಪಲು, ದವಸ ಧಾನ್ಯಗಳು ಮತ್ತು ಹಿತಮಿತವಾದ ಕೊಬ್ಬು ಇದ್ದಲ್ಲಿ ವಿಟಮಿನ್ ಇ ಕೊರತೆ ಉಂಟಾಗುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ.

Also Read  ಮಂಗಳೂರು: "ನಂದಿನಿ ಆನ್ ವೀಲ್ಸ್ ಸಂಚಾರಿ" ವಾಹನಕ್ಕೆ ಚಾಲನೆ

ಎಲ್ಲಿ ವಿಟಮಿನ್ ಇ ಹೇರಳವಾಗಿರುತ್ತದೆ?

ಕೊಬ್ಬು ಇರುವ ಆಹಾರಗಳಲ್ಲಿ ವಿಟಮಿನ್ ಇ ಹೆಚ್ಚಾಗಿ ಇರುತ್ತದೆ. ಸಸ್ಯಜನ್ಯ ಆಯಿಲ್‍ಗಳು, ಹಸಿರು ತರಕಾರಿ ಮತ್ತು ಮೀನಿನಲ್ಲಿ ವಿಟಮಿನ್ ಇ ಹೇರಳವಾಗಿದೆ. ಹುರಿದ ಬಾದಾಮಿಯಲ್ಲಿ ಅತೀ ಹೆಚ್ಚು ವಿಟಮಿನ್ ಇ ಇರುತ್ತದೆ. 60 mಟ ನ ಕಪ್‍ನಲ್ಲಿ ಸುಮಾರು 18 mg ವಿಟಮಿನ್ ಇರುತ್ತದೆ. ಸೂರ್ಯಕಾಂತಿ ಬೀಜ, ಬಟಾಣಿ, ಹುರಳೀ ಬೀಜ, ಅವರೆಕಾಳು ಮುಂತಾದವುಗಳಲ್ಲಿ ವಿಟಮಿನ್ ಇ ಹಿತಮಿತವಾಗಿ ಇರುತ್ತದೆ. ಹರಿವೆ, ಬಸಳೆ ಸೊಪ್ಪಿನಲ್ಲಿಯೂ ವಿಟಮಿನ್ ಇ ಲಭ್ಯವಿದೆ. ಗೋಡಂಬಿ ಬೀಜ, ಬಾದಾಮಿ ಬೀಜದಲ್ಲಿಯೂ ವಿಟಮಿನ್ ಇ ಸಾಮಾನ್ಯ ಪ್ರಮಾಣದಲ್ಲಿ ಇರುತ್ತದೆ. ಹಲವು ರೀತಿಯ ವಿಟಮಿನ್ ಇರುವ ಮಾತ್ರೆಯಲ್ಲಿ ವಿಟಮಿನ್ ಇ ಕೂಡ ಲಭ್ಯವಿರುತ್ತದೆ. ಅದು ಬಹಳ ಸುರಕ್ಷಿತ ಮತ್ತು ಆರೋಗ್ಯವಂತ ವ್ಯಕ್ತಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಇರುತ್ತದೆ. ವಿಟಮಿನ್ ಇ ತೆಗೆದುಕೊಳ್ಳುವುದರಿಂದ ಹೃದಯದ ತೊಂದರೆ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವ್ಯದ್ಯಕೀಯ ಪುರಾವೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿದೆ. ಅಗತ್ಯಕ್ಕಿಂತ ಜಾಸ್ತಿ ವಿಟಮಿನ್ ಇ ತೆಗೆದುಕೊಂಡಲ್ಲಿ ದೇಹಕ್ಕೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕಾರಣದಿಂದ ವೈದ್ಯರ ಅನುಮತಿ ಇಲ್ಲದೆ ವಿಟಮಿನ್ ಇ ಸೇವನೆ ಮಾಡಲೇಬಾರದು. ವಿಟಮಿನ್ ಇ ಮೆತ್ತಗಿನ ಕ್ಯಾಪ್ಸಲ್ ರೂಪದಲ್ಲಿ ಲಭ್ಯವಿದೆ. 100 ರಿಂದ 1000 mg ಎಂಬ ಪ್ರಮಾಣದಲ್ಲಿ ದೊರಕುತ್ತದೆ. ಜಗಿಯಬಹುದಾದ ಮಾತ್ರೆ ಮತ್ತು ಕರಗಿಸಿ ಕುಡಿಯಬಹುದಾದ ಔಷಧಿ ಕೂಪದಲ್ಲಿ ದೊರಕುತ್ತದೆ.

ಯಾರಿಗೆ ವಿಟಮಿನ್ ಇ ಅಗತ್ಯವಿರುತ್ತದೆ?

(1) ಜಠರ ಸಂಬಂಧಿ ಕಾಯಿಲೆ ಇದ್ದು, ಮಲದಲ್ಲಿ ಜಾಸ್ತಿ ಕೊಬ್ಬು ಸೋರಿ ಹೋಗುತ್ತಿರುವ ಖಾಯಿಲೆ ಇರುವರಿಗೆ
(2) ಪಿತ್ತಜನಕಾಂಗದ ಉರಿಯೂತ ಇರುವವರಿಗೆ
(3) ಅನ್ನನಾಳದ ಕರುಳಿನ ಉರಿಯೂತ ಇರುವವರಿಗೆ
(4) ಆಪರೇಷನ್ ಮುಖಾಂತರ ಪಿತ್ತಜನಕಾಂಗ ಗ್ರಂಥಿ ತೆಗಿಸಿದವರಿಗೆ
(5) ಲ್ಯಾಕ್ಟೋಸ್ ಅಸಹಿಷ್ಣತೆ ಇರುವವರಿಗೆ
(6) 55 ವರ್ಷದ ಮೇಲ್ಪಟ್ಟ ವಯಸ್ಕರಿಗೆ
(7) ಅತಿಯಾಗಿ ಮದ್ಯಪಾನ ಮಾಡುವವರಿಗೆ
(8) ಯಕೃತ್ತಿನ ಸಿರ್ಹೊಸಿಸ್ ಎಂಬ ರೋಗ ಇರುವವರಿಗೆ

Also Read  ಮೇ 29 ರಿಂದ  ಪ್ರಾಥಮಿಕ, ಪ್ರೌಢಶಾಲೆ ತರಗತಿಗಳು ಆರಂಭ ➤ ಶಿಕ್ಷಣ ಇಲಾಖೆ ಸೂಚನೆ.!

ವಿಟಮಿನ್ ಕೊರತೆ ಉಂಟಾದಲ್ಲಿ ಏನು ತೊಂದರೆಗಳು?

• ದೃಷ್ಠಿಯಲ್ಲಿನ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
• ದೇಹದ ಚಲನೆಯಲ್ಲಿನ ನಿಯಂತ್ರಣ ತಪ್ಪಿಹೋಗಬಹುದು
• ದೇಹದ ಸ್ನಾಯುಗಳು ದುರ್ಬಲವಾಗುತ್ತದೆ.
• ದೇಹದ ಕೈ ಮತ್ತು ಕಾಲುಗಳಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ.
• ದೇಹದ ರಕ್ಷಣಾ ವ್ಯವಸ್ಥೆ ಹದಗೆಡುತ್ತದೆ ಮತ್ತು ಬೇಗನೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ.

ಕೊನೆ ಮಾತು:
ವಿಟಮಿನ್ ಇ ದೇಹದಲ್ಲಿನ ಅತೀ ಅವಶ್ಯಕ ವಿಟಮಿನ್ ಆಗಿದ್ದು, “ಅಂಟಿಆಕ್ಸಿಡೆಂಟ್’ ಆಗಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ವಿಟಮಿನ್ ಇ ಮತ್ತು ಪೆಲಿನಿಯಂ ಎಂಬ ಖನಿಜ ಒಟ್ಟುಗೂಡಿ ಕೆಲವೊಂದು ಕಿಣ್ವಗಳನ್ನು ವಿಭಜಿಸಿ ದೇಹದಲ್ಲಿನ ಜೀವಕೋಶಗಳ ದೈಹಿಕ ಕ್ರಿಯೆಯನ್ನು ನಿಯಂತ್ರಿಸುತ್ತದೆ. ದೇಹದ ಎಲ್ಲಾ ಜೀವಕೋಶಗಳ ಪೊರೆಯಲ್ಲಿ ವಿಟಮಿನ್ ಇ ಇರುತ್ತದೆ. ಮತ್ತು ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ವಿಟಮಿನ್ ಇ ಯನ್ನು ಟೋಕೊಫೆರಾಲ್ ಎಂದು ಕರೆಯುತ್ತಾರೆ. ಅವಧಿ ಪೂರ್ವವಾಗಿ ಜನಿಸಿದ ಶಿಶುಗಳಲ್ಲಿ ಉಸಿರಾಟದ ತೊಂದರೆ ಎಂಬುವುದನ್ನು ತಡೆಯಲು ವಿಟಮಿನ್ ಇ ಬಳಸುತ್ತಾರೆ. ಅದೇ ರೀತಿ ಅವಧಿಪೂರ್ವ ಜನಿಸಿದ ಶಿಶುಗಳಲ್ಲಿ ರೆಟಿನಾ ತೊಂದರೆ ಬಾರದಂತೆಯೂ ವಿಟಮಿನ್ ಇ ಬಳಸುತ್ತಾರೆ. ದೇಹಕ್ಕೆ ಸೋಂಕು ಬಾರದಂತೆ ರಕ್ಷಣಾ ವ್ಯವಸ್ಥೆ ವೃಧ್ದಿಸಲು ವಿಟಮಿನ್ ಇ ಬಳಸುತ್ತಾರೆ. ದೇಹದಲ್ಲಿನ ರಕ್ತನಾಳಗಳನ್ನು ಹಿಗ್ಗಿಸಿ ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟದಂತೆ ವಿಟಮಿನ್ ಇ ತಡೆಯುತ್ತದೆ. ಒಟ್ಟಿನಲ್ಲಿ ವಿಟಮಿನ್ ಇ ನಮ್ಮ ದೇಹಕ್ಕೆ ಅತೀ ಅಗತ್ಯವಾದ ವಿಟಮಿನ್ ಆಗಿದ್ದು, ನಿರಂತರವಾಗಿ ನಿಯಮಿತ ಪ್ರಮಾಣದಲ್ಲಿ ವಿಟಮಿನ್ ಇ ನಮ್ಮ ದೇಹಕ್ಕೆ ಪೂರೈಕೆಯಾದಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಸದೃಡಗೊಂಡು ಜೀವಕೋಶಗಳ ಜೈವಿಕ ಕ್ರಿಯೆಗಳು ಸರಾಗವಾಗಿ ಸಾಗಿ ಯಾವುದೇ ರೋಗ ಬರುವ ಸಾಧ್ಯತೆ ಕ್ಷೀಣಿಸುತ್ತದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

Also Read  ಮಹಿಳೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

ಡಾ| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top