(ನ್ಯೂಸ್ ಕಡಬ) newskadaba.com ಮೂಡುಬಿದರೆ, ಆ. 24. ವಿಶ್ವ ಪರಂಪರೆಯ ಪವಿತ್ರ ತಾಣಗಳಲ್ಲಿ ಒಂದಾಗಿರುವ ಹಾಗೂ “ತ್ರಿಭುವನ ತಿಲಕ ಚೂಡಾಮಣಿ” ಎಂದೇ ಪ್ರಸಿದ್ದವಾದ ಮೂಡುಬಿದಿರೆಯ ಸಾವಿರ ಕಂಬದ ಬಸದಿಯು ದೇಶದ ಪ್ರಮುಖ ಜೈನ ಬಸದಿಗಳ ವಾಸ್ತುಶಿಲ್ಪದ ಅಚ್ಚರಿಗಳ ಪೈಕಿ ಇದೀಗ ಮೂರನೇ ಸ್ಥಾನವನ್ನು ಪಡೆದಿದೆ ಎಂದು ಶ್ರೀ ಜೈನ ಮಠಾದೀಶ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಅತ್ಯಂತ ಸೂಕ್ಷ್ಮ ಕೆತ್ತನೆಯ ತೀರ್ಥಂಕರ ಜಿನ ಬಿಂಬಗಳು, ಮತ್ತು ಸರ್ವ ಧರ್ಮ ಸಮನ್ವಯದ ಅನೇಕ ಕಲ್ಲಿನ ಕೆತ್ತನೆಗಳು, ಬೆಡಗಿನ ಭಿತ್ತಿಚಿತ್ರಗಳುಳ್ಳ ವಾಸ್ತುವೈಭವದ ಬಸದಿಗಳ ಪಟ್ಟಿಯಲ್ಲಿ ಸಾವಿರ ಕಂಬದ ಬಸದಿಯು ರಾಜಸ್ಥಾನದ ರಣಾಕ್ ಪುರ ಬಸದಿ, ದಿಲ್ ವಾರಾ ದೇಗುಲದ ಅನಂತರದ ಸ್ಥಾನದಲ್ಲಿ ಗುರುತಿಸಲ್ಪಟ್ಟಿರುವುದು ದಿಲ್ಲಿಯ ಜೈನ ಸನ್ಸ್ ಮೂಲಕ ಖಚಿತವಾಗಿದೆ ಎಂದು ತಿಳಿಸಿದ್ದಾರೆ. ಈ ಸಾವಿರ ಕಂಬದ ಬಸದಿಗೆ ಪ್ರತಿ ವರ್ಷ ವಿಶ್ವದ ಎಲ್ಲೆಡೆಯಿಂದ ಅನೇಕ ಸಂಖ್ಯೆಗಳಲ್ಲಿ ಕಲಾಪ್ರಿಯರು ಹಾಗೂ ಯಾತ್ರಿಕರು ಭೇಟಿ ನೀಡುತ್ತಿರುತ್ತಾರೆ. ಆದರೆ ಈ ವರ್ಷ ಕೊರೊನಾ ಸಂಕಷ್ಟದಿಂದಾಗಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದ್ದು, ಇದೀಗ ಇಂತಹ ಪರಿಸ್ಥಿತಿಯಿಂದಾಗಿ ಬಸದಿಯಲ್ಲಿ ನಿತ್ಯ ತ್ರಿಕಾಲ ಪೂಜೆಯ ವ್ಯವಸ್ಥೆ ಮಾಡಲಾಗಿದೆ ಎಂದರು.