ನಗರ ಅಭಿವೃದ್ಧಿ ಕಾಮಗಾರಿ ಕಾಲಮಿತಿಯಲ್ಲಿ ಮುಗಿಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್‌ಕಡಬ)newskadaba.com.ಮಂಗಳೂರು ಆಗಸ್ಟ್ 21: ರಸ್ತೆ, ಫುಟ್‍ಪಾತ್ ಸೇರಿದಂತೆ ಮಂಗಳೂರು ನಗರದಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯಗಳಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ವಿಳಂಭವಿಲ್ಲದೆ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲೇಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳೂರು ಸ್ಮಾರ್ಟ್‍ಸಿಟಿ 9ನೇ ಅಂತರ್ ಇಲಾಖಾ ಟಾಸ್ಕ್‍ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಸ್ತೆ ಅಗಲೀಕರಣ, ಫುಟ್‍ಪಾತ್, ಒಳಚರಂಡಿ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾದ ನಗರದ ಕೆಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದೆ. ಪುರಭವನದ ಮುಂಭಾಗದಲ್ಲಿ ಪಾದಾಚಾರಿ ಸುರಂಗ ಸೇತುವೆ ಕಾಮಗಾರಿ ನಗರದ ಹೃದಯಭಾಗದಲ್ಲಿ ನಡೆಯುತ್ತಿದ್ದರೂ, ಬೆರಳಣಿಕೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕಾಮಗಾರಿಯನ್ನು ತೀವ್ರಗೊಳಿಸಲು ಸೂಚಿಸಿದರು.

ಮಂಗಳೂರು ನಗರದ ಕೆಲವು ರಸ್ತೆ ಅಗಲೀಕರಣ ಕಾಮಗಾರಿಗಳು ಖಾಸಗೀ ಜಮೀನು ಸಮಸ್ಯೆಯಿಂದ ನೆನಗುದಿಗೆ ಬಿದ್ದಿದೆ. ಟಿಡಿಆರ್ ಅಡಿ ಜಮೀನು ನೀಡಲು ಜಮೀನು ಮಾಲೀಕರನ್ನು ಮಹಾನಗರಪಾಲಿಕೆ ಅಧಿಕಾರಿಗಳು ನಿರಂತರವಾಗಿ ಮನವೊಲಿಸಬೇಕು. ಮಹಾನಗರಪಾಲಿಕೆ ಆಯುಕ್ತರು ಈ ಬಗ್ಗೆ ಖುದ್ದು ಗಮನಹರಿಸಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು. ಸ್ಮಾರ್ಟ್ ರಸ್ತೆ ಯೋಜನೆಯಲ್ಲಿ ರಸ್ತೆ ಅಗಲೀಕರಣ, ಫುಟ್‍ಪಾತ್, ಚರಂಡಿ, ಕೇಬಲ್ ಡೆಕ್, ದಾರಿದೀಪ ಸೇರಿದಂತೆ ಸಮಗ್ರ ಕಾಮಗಾರಿಯನ್ನು ಸೇರಿಸಿ ಒಂದು ಯೋಜನೆ ರೂಪಿಸಬೇಕು ಎಂದು ಡಾ. ರಾಜೇಂದ್ರ ತಿಳಿಸಿದರು.

Also Read  ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತ ಮುಖಂಡರ ಸಭೆ

ಹಂಪನಕಟ್ಟೆ ಹಳೇ ಸರ್ವೀಸ್ ಬಸ್ ನಿಲ್ದಾಣ ಜಾಗದಲ್ಲಿ ಬಹುಮಹಡಿ ಕಾರು ಪಾರ್ಕಿಂಗ್ ನಿರ್ಮಿಸಲು ಸ್ಮಾರ್ಟ್ ಸಿಟಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಅವರು ಸೂಚಿಸಿದರು. ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲು ರೈಲ್ವೇ ಇಲಾಖೆ 30 ಕೋಟಿ ರೂ. ಅಂದಾಜುಪಟ್ಟಿಗೆ ಒಪ್ಪಿಗೆ ನೀಡಲಾಗಿದ್ದು, ಈ ಸಂಬಂಧ ಈಗಾಗಲೇ ಮೊದಲ ಕಂತು ರೂ. 10 ಕೋಟಿ ಮೊತ್ತವನ್ನು ದಕ್ಷಿಣ ರೈಲ್ವೇಯಲ್ಲಿ ಠೇವಣಿ ಇಡಲಾಗಿದೆ. ಈ ಕಾಮಗಾರಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲು ರೈಲ್ವೇ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಾನಗರಪಾಲಿಕೆ ವಿವಿಧ ವಾರ್ಡುಗಳಲ್ಲಿ ಒಳಚರಂಡಿ ಯುಜಿಡಿ ವಿಸ್ತರಣೆ ಕಾಮಗಾರಿ ಹಾಗೂ ಯುಜಿಡಿ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ನೂತನ ಒಳಚರಂಡಿ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಡಾ. ಕೆ.ವಿ. ರಾಜೇಂದ್ರ ಸೂಚಿಸಿದರು.

error: Content is protected !!
Scroll to Top