(ನ್ಯೂಸ್ ಕಡಬ) newskadaba.com ಮಂಗಳೂರು. ಆ,21: ಕಳೆದ ಬುಧವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ವಸಂತ ಕೃಷ್ಣ ಶೇರಿಗಾರ್ (33) ಎಂಬಾತನನ್ನು ಬಂಧಿಸಲಾಗಿದ್ದು, ಪ್ರಚಾರ ಪಡೆಯುವ ಉದ್ದೇಶದಿಂದ ಆತ ಈ ಕೃತ್ಯ ಎಸಗಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿ ಕೇವಲ ಪ್ರಚಾರಕ್ಕಾಗಿ ತಾನು ಈ ಕೃತ್ಯ ಎಸಗಿರುವುದಾಗಿ ಪೋಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ತನ್ನ ಪ್ರಚಾರದ ಹುಚ್ಚಿಗೆ ಈತ ಇದೀಗ ಜೈಲಿನ ಕಂಬಿ ಎಣಿಸಲು ಆರಂಭಿಸಿದ್ದಾನೆ. ಆಗಸ್ಟ್ 19 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಾದ ವಾಸುದೇವ್ ರಾವ್ ಅವರಿಗೆ ಕರೆ ಮಾಡಿ ,ತಾನು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಮಾಹಿತಿ ನೀಡುತ್ತಾನೆ.
ತಕ್ಷಣವೇ ಪ್ರಕರಣದ ಗಂಭೀರತೆಯನ್ನು ಮನವರಿಕೆ ಮಾಡಿಕೊಂಡ ಮಾಜಿ ನಿರ್ದೇಶಕರು ಈ ವಿಚಾರವನ್ನು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರ ಗಮನಕ್ಕೆ ತರುತ್ತಾರೆ.ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿ , ಬಾಂಬ್ ಕರೆಯ ಜಾಡನ್ನು ಪತ್ತೆ ಹಚ್ಚಲು ಪೋಲೀಸರು ಆರಂಭಿಸುತ್ತಾರೆ.ಮೊಬೈಲ್ ನಂಬರ್ ಆಧಾರದಲ್ಲಿ ತನಿಖೆಗೆ ಇಳಿದ ಮಂಗಳೂರು ನಗರ, ಉಡುಪಿ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಅದೇ ದಿನ ಆರೋಪಿಯನ್ನು ಬಂಧಿಸಿದ್ದರು.ಕಾರ್ಕಳ ತಾಲೂಕಿನ ಮುದ್ರಾಡಿಯ ನಿವಾಸಿಯಾಗಿರುವ ಆರೋಪಿಯ ವಿರುದ್ಧ ಜಾಮೀನುರಹಿತ ಪ್ರಕರಣವನ್ನು ದಾಖಲಿಸಲಾಗಿದೆ.