(ನ್ಯೂಸ್ ಕಡಬ) newskadaba.com ಕಡಬ, ಆ.20. ಬಿಳಿನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಅಕ್ರಮ ಶೆಡ್ ನಿರ್ಮಾಣದ ವಿವಾದಕ್ಕೆ ಕೊನೆಗೂ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ 20 ಅನಧಿಕೃತ ಅಂಗಡಿಗಳಿಗೆ ಇಂದು ಬೀಗ ಜಡಿದಿದ್ದಾರೆ. ಈ ಮೂಲಕ ಕಾಂಗ್ರೇಸ್ – ಬಿಜೆಪಿ ಪಕ್ಷಗಳ ಗುದ್ದಾಟಕ್ಕೆ ತೆರೆ ಬಿದ್ದಂತಾಗಿದೆ. ಅಕ್ರಮ ಶೆಡ್ ತೆರವಿಗಾಗಿ ಹಲವು ದಿನಗಳಿಂದ ಬಿಳಿನೆಲೆ ಪಂಚಾಯತ್ ಮುಂಭಾಗದಲ್ಲಿ ಅಂಗಡಿ ಮಾಲಕಿ ಅನ್ನಪೂರ್ಣ ಕುಟುಂಬ ಪ್ರತಿಭಟನೆ ಮುಂದುವರಿಸುತ್ತಲೇ ಬಂದಿದ್ದರು. ಇದು ಪ್ರತಿಭಟನೆ ಸೇರಿದಂತೆ ರಾಜಕೀಯವಾಗಿ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ಗುದ್ದಾಟಕ್ಕೆ ತಾತ್ಕಾಲಿಕ ವೇದಿಕೆಯಾಗಿತ್ತು. ಇಂದು ಅಧಿಕಾರಿಗಳು ಬೀಗ ಜಡಿಯುವ ಮೂಲಕ ತೆರೆ ಎಳೆದಿದ್ದಾರೆ. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಆಗಮಿಸಿದ ಪುತ್ತೂರು ತಾಲೂಕು ಪಂಚಾಯತ್ ಕಾರ್ಯಾನಿರ್ವಾಹಣಾಧಿಕಾರಿ, ಕಡಬ ತಹಶೀಲ್ದಾರ್, ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ, ಕಂದಾಯ ಹಾಗೂ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಪೂರ್ವ ತಯಾರಿಯಂತೆ ಕಾರ್ಯಾಚರಣೆ ನಡೆಸಿ ಬೀಗ ಜಡಿದು ಸೀಲ್ ಮಾಡಿದ್ದಾರೆ. ಯಾವುದೇ ಅಹಿತರ ಘಟನೆ ನಡೆಯದಂತೆ ವಿಶೇಷ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು. ಇದೇ ವೇಳೆಯಲ್ಲಿ ಬಿಳಿನೆಲೆ, ನೆಟ್ಟಣ, ಕೈಕಂಬ, ಚೇರು ಪ್ರದೇಶದಲ್ಲಿನ ಒಟ್ಟು 20 ಅಂಗಡಿಗಳಿಗೆ ಬೀಗ ಹಾಕಲಾಗಿದೆ. ವಿಶೇಷವಾಗಿ ವಿವಾದಿತ ಅಕ್ರಮ ಶೆಡ್, ಸಮೀಪದಲ್ಲಿರುವ ದಯಾನಂದ ಮಾಲಕತ್ವದ ಅಂಗಡಿ ಹಾಗೂ ಮನೆ, ಪ್ರತಿಭಟನೆ ನಿರತ ಅನ್ನಪೂರ್ಣ ಅವರ ಅಂಗಡಿ, ಮನೆಗಳನ್ನು ಸೀಲ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪುತ್ತೂರು ತಾ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಬಿಳಿನೆಲೆ ಗ್ರಾ.ಪಂ. ಆಡಳಿತಾಧಿಕಾರಿ ಭರತ್.ಎಂ., ಡಿವೈಎಸ್ಪಿ ದಿನಕರ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆ, ಕಡಬ ಠಾಣಾ ಎಸ್ಐ ರುಕ್ಮನಾಯ್ಕ್, ಉಪ್ಪಿನಂಗಡಿ ಠಾಣೆಯ ಎಸ್ಐ ಈರಯ್ಯ, ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಉದಯರವಿ ಸೇರಿದಂತೆ ಕೆ.ಎಸ್.ಆರ್.ಪಿ.ಯ 1 ತುಕಡಿ ಮತ್ತು ಮಹಿಳಾ ಪೊಲೀಸರು ಕಾರ್ಯಾಚರಣೆಯಲ್ಲಿದ್ದರು.