ಎಸ್ಸಿಪಿ, ಟಿಎಸ್ಪಿ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿಗೆ ತಾ.ಪಂ. ಇ.ಓ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 19. ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆಯ ಯೋಜನೆಯಡಿ ಎಲ್ಲಾ ಇಲಾಖೆಗಳಿಗೆ ಬಿಡುಗಡೆಗೊಂಡ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು  ಮಂಗಳೂರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸದಾನಂದ ತಿಳಿಸಿದ್ದಾರೆ.

ಅವರು ಬುಧವಾರ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ ಉಪ-ಹಂಚಿಕೆ ಮತ್ತು ಬುಡಕಟ್ಟು ಉಪ-ಹಂಚಿಕೆಯ ಮೇಲ್ವಿಚಾರಣಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ  ಅನುಸೂಚಿತ ಜಾತಿ ಉಪ-ಹಂಚಿಕೆ ಮತ್ತು ಬುಡಕಟ್ಟು ಉಪ-ಹಂಚಿಕೆಯಡಿ ರಾಜ್ಯ ಮತ್ತು ಜಿಲ್ಲಾ ವಲಯದಲ್ಲಿ ವಿಶೇಷ ಘಟಕ ಯೋಜನೆಯ ಪ್ರಗತಿ ವಿವರ ಹಾಗೂ ಪರಿಶಿಷ್ಟ ವರ್ಗಗಳ ಉಪಯೋಜನೆಯ ವಿವಿಧ ಇಲಾಖಾ ಪ್ರಗತಿ ವಿವರದ ಬಗ್ಗೆ ಅವರು ಮಾಹಿತಿ ಪಡೆದರು. ಕೃಷಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ  ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆಯನ್ವಯ ಹಸಿರೆಲೆ ಗೊಬ್ಬರದ ಬೀಜ, ಕೃಷಿ, ಸುಣ್ಣ ಕಾರ್ಯಕ್ರಮದಲ್ಲಿ ಲಘು ಪೋಷಕಾಂಶ ಸಾವಯವ ಗೊಬ್ಬರ ವಿತರಣೆಗೆ ರಾಜ್ಯ ವಲಯದಲ್ಲ್ಲಿ 0.64ರಷ್ಟು ಅನುದಾನ ಬಿಡುಗಡೆಗೊಂಡಿದೆ. ಜಿಲ್ಲಾ ವಲಯದಲ್ಲಿ ಅನುದಾನ ಬಿಡುಗಡೆಗೊಂಡಿರುವುದಿಲ್ಲ. ಪರಿಶಿಷ್ಟ ವರ್ಗಗಳ ಉಪ ಯೋಜನೆಯಡಿ 2020-21 ನೇ ಸಾಲಿಗೆ ರಾಜ್ಯ ವಲಯದಲ್ಲಿ 0.21 ರಷ್ಟು ಅನುದಾನ ಬಿಡುಗಡೆಗೊಂಡಿದೆ. ಜಿಲ್ಲಾ ವಲಯದಲ್ಲಿ ಅನುದಾನ ಬಿಡುಗಡೆಗೊಂಡಿರುವುದಿಲ್ಲ ಎಂದು ಮಂಗಳೂರು ಸಹಾಯಕ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.

Also Read  ಸಿಟಿ ರವಿಗೆ ಒಲಿಯುತ್ತಾ ರಾಜ್ಯಾಧ್ಯಕ್ಷ ಪಟ್ಟ..! - ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಿಂದ ಕೊಕ್


ತೋಟಗಾರಿಕೆ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಕಾರ್ಯಕ್ರಮದಲ್ಲಿ ಹೂ ಬೆಳೆಗಾರರಿಗೆ ಪರಿಹಾರ ಧನ ಘಟಕಕ್ಕೆ ರಾಜ್ಯವಲಯದಲ್ಲಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲಾ ವಲಯದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮದಡಿ ರೂ. 5,000 ಅನುದಾನ ಬಿಡುಗಡೆಯಾಗಿದೆ. ಪರಿಶಿಷ್ಟ ವರ್ಗಗಳ ಉಪಯೋಜನೆಯಡಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಕಾರ್ಯಕ್ರಮದಲ್ಲಿ ಹೂ ಬೆಳೆಗಾರರಿಗೆ ಪರಿಹಾರ ಧನ ಘಟಕಕ್ಕೆ ರಾಜ್ಯವಲಯದಲ್ಲಿ 2,000 ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪರಿಶಿಷ್ಟ ವರ್ಗಗಳ ಉಪಯೋಜನೆಯಡಿ ಜಿಲ್ಲಾ ವಲಯ, ಹೈನುಗಾರಿಕೆ ಘಟಕಕ್ಕೆ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 1 ಮಿಶ್ರತಳಿ ಹಸು ಸಾಕಾಣಿಕೆಗೆ ಬ್ಯಾಂಕ್ ಸಾಲದೊಂದಿಗೆ ಶೇಕಡಾ 90 ರಷ್ಟು ಸಹಾಯಧನ  ನೀಡುವ ಕಾರ್ಯಕ್ರಮದಲ್ಲಿ 2020-21 ನೇ ಸಾಲಿಗೆ ನಿಗಧಿಪಡಿಸಿದ ಗುರಿಯನ್ವಯ 3 ರಷ್ಟು ಭೌತಿಕ ಹಾಗೂ 1.62 ಆರ್ಥಿಕ ಪ್ರಗತಿ ಸಾಧಿಸಿದೆ. ಪರಿಶಿಷ್ಟ ವರ್ಗಗಳ ಉಪಯೋಜನೆಯಡಿ ರಾಜ್ಯ ವಲಯದಲ್ಲಿ ಆಯ್ದ ಫಲಾನುಭವಿಗಳಿಗೆ ಸೋಲಾರ್ ಲ್ಯಾಂಪ್ ಅಳವಡಿಕೆ ಕಾರ್ಯಕ್ರಮದಲ್ಲಿ 2020-21 ನೇ ಸಾಲಿಗೆ ರೂ. 50,000 ಬಿಡುಗಡೆಗೊಂಡಿದ್ದು, ಬಾಕಿ ಉಳಿದವುಗಳಿಗೆ ಕ್ರಿಯಾ ಯೋಜನೆ ತಯಾರಿಸಿ ತಾಲೂಕು ಪಂಚಾಯತ್‍ಗೆ ಮಂಡಿಸಲಾಗಿದ್ದು ಅನುಮೋದನೆ ಆದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ವಿಶೇಷ ಘಟಕ ಯೋಜನೆಯಡಿ ರಾಜ್ಯವಲಯ ಹಾಗೂ ಜಿಲ್ಲಾ ವಲಯದಲ್ಲಿ ಅನುದಾನ ಬಿಡುಗಡೆಗೊಂಡಿರುವುದಿಲ್ಲ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದರು.

Also Read  ಸುಳ್ಯ: ಬಟ್ಟೆ ಒಗೆಯುತ್ತಿದ್ದಾಗ ಹೃದಯಾಘಾತ ► ಮಹಿಳೆ ಸ್ಥಳದಲ್ಲೇ ಮೃತ್ಯು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ನಗರ) ವಿಶೇಷ ಘಟಕ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದನ್ವಯ 15.83 ರಷ್ಟು ಅನುದಾನ ಬಿಡುಗಡೆಯಾಗಿದೆ. 7.60 ರಷ್ಟು ಪ್ರಗತಿ ಸಾಧಿಸಿದೆ. ಸ್ತ್ರೀ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಅನುದಾನ ಬಂದಿರುವುದಿಲ್ಲ. ವಿಪರೀತ ಕಡಿಮೆ ತೂಕದ ಮಕ್ಕಳು ಕಾರ್ಯಕ್ರಮದಡಿ ವಿಪರೀತ ತೂಕದ ಮಕ್ಕಳಿಗೆ ವಾರದ 5 ದಿನ ಮೊಟ್ಟೆ ಹಾಗೂ ಹಾಲು ವಿತರಣೆ ಅಲ್ಲದೆ ಇಲಾಖೆಯಿಂದ ವೈದ್ಯಕೀಯ ವೆಚ್ಚ ರೂ 2,000 ಭರಿಸಲಾಗುತ್ತದೆ. ಮಾತೃವಂದನಾ ಯೋಜನೆಯಡಿ  53 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆನ್‍ಲೈನ್ ಮೂಲಕ ಮೊತ್ತವನ್ನು ಜಮೆ ಮಾಡಲಾಗುತ್ತದೆ ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ಧರು.

error: Content is protected !!
Scroll to Top