(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್ 19. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಖಾಯಂ ಜನತಾ ನ್ಯಾಯಾಲಯಗಳನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಸ್ಥಾಪಿಸಿದ್ದು, ಆ ಪೈಕಿ ಮಂಗಳೂರಿನಲ್ಲಿಯೂ ಕಾರ್ಯನಿರ್ವಹಿಸುತ್ತಿರುತ್ತದೆ.
ನಗರದ ಬಲ್ಲಾಳ್‍ಬಾಗ್ ಎಂ.ಜಿ.ರಸ್ತೆಯಲ್ಲಿರುವ “ತಕ್ಷಿಲಾ” ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಖಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳು ಒಳಪಟ್ಟಿರುತ್ತದೆ. ಈ ಖಾಯಂ ಜನತಾ ನ್ಯಾಯಾಲಯಗಳಲ್ಲಿ ಸಾರ್ವಜನಿಕಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ಈ ಕೆಳಕಂಡ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ಪ್ರಯಾಣಿಕರನ್ನು ಅಥವಾ ಸರಕನ್ನು ಸಾಗಿಸುವ ಸಾಗಣೆ ಸೇವೆ (ರೈಲ್ವೆ ಸಾಗಣೆ ಬಿಟ್ಟು), ಅಂಚೆ, ತಂತಿ ಮತ್ತು ದೂರವಾಣಿ ಸೇವೆ, ವಿದ್ಯುತ್, ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ, ಆಸ್ಪತ್ರೆ ಮತ್ತು ಮೆಡಿಕಲ್, ಇನ್ಸುರೆನ್ಸ್, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು, ಶಿಕ್ಷಣ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಪ್ರಕರಣಗಳು, ಗೃಹ ಅಥವಾ ರಿಯಲ್ ಎಸ್ಟೇಟ್‍ಗಳಿಗೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ದಾಖಲಾಗದ ಪ್ರಕರಣಗಳನ್ನು ಖಾಯಂ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಈ ವಿಷಯಗಳಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು, ಬ್ಯಾಂಕುಗಳು, ವಿಮಾ ಕಂಪನಿಗಳು, ಆಸ್ಪತ್ರೆಗಳು, ಸಾರಿಗೆ, ಅಂಚೆ ಮತ್ತು ದೂರವಾಣಿ ಇಲಾಖೆಗಳು ಹಾಗೂ ಸಾರ್ವಜನಿಕರು ತಮಗೆ ಸಂಬಂಧಿಸಿದ ಇನ್ನೂ ನ್ಯಾಯಾಲಯಗಳಲ್ಲಿ ದಾಖಲುಗೊಳ್ಳದ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಖಾಯಂ ಜನತಾ ನ್ಯಾಯಾಲಯದಲ್ಲಿ ದಾಖಲಿಸಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ನೇರವಾಗಿ ಅಥವಾ ವಕೀಲರ ಮೂಲಕ ತಮ್ಮ ವ್ಯಾಜ್ಯವನ್ನು ಪ್ರತಿನಿಧಿಸಬಹುದು, ಈ ನ್ಯಾಯಾಲಯದಲ್ಲಿ ಒಂದುಕೋಟಿ ಮೊತ್ತದ ವರೆಗಿನ ಪ್ರಕರಣಗಳನ್ನು ಇತ್ಯರ್ಥ ಪಡಿಸಬಹುದಾಗಿದ್ದು, ಪ್ರಕರಣಗಳನ್ನು ದಾಖಲು ಮಾಡಲು ಯಾವುದೇ ಶುಲ್ಕವಿರುವುದಿಲ್ಲ ಮತ್ತು ಕಡಿಮೆ ಸಮಯದಲ್ಲಿ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾದೆ. ಎಲ್ಲಾ ಇಲಾಖೆಗಳು, ಸಂಸ್ಥೆಗಳು, ವಕೀಲರು ಹಾಗೂ ಸಾರ್ವಜನಿಕರು ತಮಗೆ ಸಂಬಂಧಿಸಿದ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಈ ನ್ಯಾಯಾಲಯದಲ್ಲಿ ದಾಖಲು ಮಾಡಿ ಮೂಲಕ ಆತ್ಯಂತ ಶೀಘ್ರವಾಗಿ ಇತ್ಯರ್ಥಪಡಿಸಿಕೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಮಂಗಳೂರು ಖಾಯಂಜನತಾ ನ್ಯಾಯಾಲಯದ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.