(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.15, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ನೀಡುತ್ತಾ ಬಂದಿದೆ. ಈ ಕೃತ್ಯದ ಹಿಂದೆ ಗೋವಾ ಮೂಲದ ಸನಾತನ ಸಂಸ್ಥೆ ಇರಬಹುದಾ ಎನ್ನುವ ಶಂಕೆಯನ್ನು ವಿಶೇಷ ತನಿಖಾ ತಂಡದ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಗೌರಿ ಹತ್ಯೆಗೆ ಬಳಸಲಾದ 7.65 ಎಂಎಂ ಪಿಸ್ತೂಲ್, ವಿಚಾರವಾದಿಗಳಾದ ಕಲಬುರ್ಗಿ, ಪನ್ಸಾರೆ, ದಾಬೋಲ್ಕರ್ ಅವರ ಹತ್ಯೆಗೂ 7.65 ಎಂಎಂ ಪಿಸ್ತೂಲನ್ನೆ ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ಪಿಸ್ತೂಲ್ ಬಳಕೆಯ ಸಾಮ್ಯತೆ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ಎಸ್‍ಐಟಿ ಈಗ ಸನಾತನ ಸಂಸ್ಥೆಯ ರುದ್ರಪಾಟೀಲ್ ಬಗ್ಗೆ ಶೋಧ ಆರಂಭಿಸಿದೆ ಎಂದು ಎಸ್‍ಐಟಿ ಮೂಲಗಳು ಮಾಹಿತಿ ನೀಡಿವೆ.
ರುದ್ರಪಾಟೀಲ್ ಮೂಲತಃ ಸಾಂಗ್ಲಿಯವನು. ಇವನು ಸನಾತನ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ. ಆದರೆ ರುದ್ರಪಾಟೀಲ್ ಹೇಗಿದ್ದಾನೆ ಎಂದು ಯಾರಿಗೂ ಗೊತ್ತಿಲ್ಲ. ಪೋಲಿಸರ ಬಳಿ ಅವನ 15 ವರ್ಷದ ಫೋಟೋ ಬಿಟ್ಟರೆ ಬೇರೆ ಯಾವ ಮಾಹಿತಿಯೂ ಇಲ್ಲ. ಕಲಬುರ್ಗಿ ಹತ್ಯೆಯಲ್ಲಿ ಇವನು ಪ್ರಮುಖ ಪಾತ್ರವಹಿಸಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಈತನಿಗಾಗಿ ಎಸ್‍ಐಟಿ ತೀವ್ರ ಹುಡುಕಾಟ ನಡೆಸುತ್ತಿದೆ. ಪ್ರಸ್ತುತ ರುದ್ರಪಾಟೀಲ್ ತನ್ನ ತಂಡದ ಜೊತೆ ನೇಪಾಳದಲ್ಲಿ ಅವಿತಿದ್ದಾನೆ ಎನ್ನುವ ಮಾಹಿತಿ ಇದೆ.
ರುದ್ರಪಾಟೀಲ್ ಜೊತೆ ವಿನಯ್ ಪವರ್ ಮತ್ತು ಸಾರಂಗ್ ಅಕೋಳ್ಕರ್ ಸೇರಿ ಈ ಹತ್ಯೆಗಳನ್ನು ಮಾಡಿದ್ದಾರೆ ಎನ್ನುವ ಶಂಕೆಯಿದ್ದು, ಇವರ ಪತ್ತೆಗೆ ಬಲೆ ಬೀಸಲಾಗಿದೆ. ಈ ಮೂವರು ಸಿಬಿಐ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಯ ವಾಂಟೆಡ್ ಪಟ್ಟಿಯಲ್ಲಿ ಇದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದಾರೆ.
ಈಗಾಗಲೇ ಸಿಬಿಐ, ಎನ್‍ಐಎ, ಮಹಾರಾಷ್ಟ್ರ ಹಾಗೂ ಕರ್ನಾಟಕ ಪೊಲೀಸರು ಎಷ್ಟೇ ಹೆಣಗಾಡಿದರೂ ಆರೋಪಿಗಳ ಬಗ್ಗೆ ಕಿಂಚಿತ್ತು ಮಾಹಿತಿ ಸಿಗುತ್ತಿಲ್ಲ. ಈ ಹಿಂದೆ ರುದ್ರಪಾಟೀಲ್ ಮೇಲೆ ಅನುಮಾನಗೊಂಡು ಅವನ ಗೆಳತಿಯನ್ನು ವಿಚಾರಣೆ ಮಾಡಲಾಗಿತ್ತು. ಆದರೆ ಈಗ ಅವನ ಗೆಳತಿಯೂ ನಾಪತ್ತೆಯಾಗಿದ್ದಾಳೆ.