(ನ್ಯೂಸ್ ಕಡಬ) newskadaba.com ಆ. 14. ಕೋವಿಡ್-19 ಎಂಬ ಕೊರೋನಾ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಸೋಂಕು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುವ ಸಂದರ್ಭ ಅದಾಗಿತ್ತು. ಜಗತ್ತಿನ ಎಲ್ಲಾ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ವೈದ್ಯಕೀಯ ವ್ಯವಹಾರಗಳು ಸ್ತಬ್ಧವಾಗಿತ್ತು. ದಂತ ವೈದ್ಯಕೀಯ ಕ್ಷೇತ್ರವಂತೂ ಈ ಕೊರೋನಾ ಕಾಟದಿಂದಾಗಿ ಮಕಾಡೆ ಮಲಗಿತ್ತು. ಯಾವ ದಂತ ವೈದ್ಯರಿಗೂ ಚಿಕಿತ್ಸಾಲಯ ತೆರೆಯಲು ಅನುಮತಿ ಇರಲಿಲ್ಲ ಮತ್ತು ಧೈರ್ಯವೂ ಇರಲಿಲ್ಲ. ಮಾರ್ಚ್ 23 ರಿಂದ ದೇಶ ಸಂಪೂರ್ಣ ಲಾಕ್‍ಡೌನ್ ವ್ಯವಸ್ಥೆಗೆ ಶರಣಾಗಿತ್ತು. ಅತಿಯಾದ ನೋವಿರುವ ರೋಗಿಗಳು ತಂತಮ್ಮ ದಂತ ವೈದ್ಯರಿಗೆ ಫೋನಾಯಿಸಿ ಔಷಧಿಯನ್ನು ವಾಟ್ಸಾಪ್‍ಗಳಲ್ಲಿ ಮೆಸೇಜಿಸಿಕೊಂಡು ನೋವು ಶಮನ ಮಾಡುವ ಅನಿವಾರ್ಯತೆಗೆ ಸಿಲುಕಿದ್ದರು. ದಂತ ವೈದ್ಯರು ಕೆಲಸವಿಲ್ಲದೆ ಮನೆಯಲ್ಲಿಯೇ ಉಳಿಯುವಂತಾಗಿತ್ತು. ತಮ್ಮ ರೋಗಿಗಳ ನೋವು ಶಮನ ಮಾಡಲು ಸಾಧ್ಯವಾಗುವುದಿಲ್ಲವಲ್ಲ್ಲಾ ಎಂಬ ಕೊರಗು ಎಲ್ಲಾ ದಂತ ವೈದ್ಯರಿಗೂ ಕಾಡುತ್ತಿತ್ತು. ಯಾಕೆಂದರೆ ಒಂದೆರಡು ಬಾರಿ ಹಲ್ಲು ನೋವನ್ನು ಮಾತ್ರೆಗಳ ಮುಖಾಂತರ ಶಮನ ಮಾಡಬಹುದು.
ಆದರೆ ಪದೇಪದೇ ಅದೇ ಮಾತ್ರೆ ಬಳಸಿದಲ್ಲಿ ನೋವು ಶಮನವಾಗದಿರಬಹುದು ಮತ್ತು ಲಿವರ್ ತೊಂದರೆಗೂ ಕಾರಣವಾಗಬಹುದು ಎಂಬ ಆತಂಕ ರೋಗಿ ಮತ್ತು ವೈದ್ಯರಲ್ಲಿ ಕಾಡುತ್ತಿತ್ತು. ಒಟ್ಟಿನಲ್ಲಿ ಕೋವಿಡ್-19 ಕಾಟದಿಂದ ಜಗತ್ತಿನ ಎಲ್ಲಾ ಚಟುವಟಿಕೆಗಳೂ ನಿಂತ ನೀರಿನಂತಾಗಿತ್ತು. ಏಪ್ರಿಲ್ ತಿಂಗಳ ಮೊದಲ ವಾರ ಸುಮಾರು ಮುಸ್ಸಂಜೆಯ 7 ಗಂಟೆಯ ಸಮಯ ನನ್ನ ಪರಿಚಿತ ರೋಗಿಯೊಬ್ಬರು ಆ ಕಡೆಯಿಂದ ಗಾಬರಿಯಿಂದ ಮಾತಾಡುತ್ತಿದ್ದರು. ಅವರ ಮಾತಿನ ಧಾಟಿ ಮತ್ತು ವರಸೆ ನೋಡಿದಾಗ ಅದು ಬರೀ ಹಲ್ಲುನೋವಿನ ವಿಚಾರವಲ್ಲ ಎಂಬುದು ನನಗೆ ಆಗಲೇ ಮನವರಿಕೆಯಾಗಿತ್ತು. ದಿನವೊಂದರಲ್ಲಿ ಕನಿಷ್ಟ 30 ರಿಂದ 40 ಮಂದಿ ದಂತ ಸಂಬಂಧಿ ರೋಗಗಳಿಗೆ ಫೋನ್ ಮಾಡಿ ಸಲಹೆ ಮಾಡುತ್ತಿದ್ದ ಕಾರಣದಿಂದಾಗಿ ರೋಗಿಗಳ ಮಾತಿನ ಧಾಟಿಯಿಂದಲೇ ನನಗೆ ಅವರ ರೋಗದ ಲಕ್ಷಣ ತೀವ್ರತೆ ಮತ್ತು ಸೂಕ್ಷ್ಮತೆ ಬಗ್ಗೆ ಮಾಹಿತಿ ಸಿಗುತ್ತಿತ್ತು. ನನಗೆ ಫೋನ್ ಮಾಡಿದ ವ್ಯಕ್ತಿ ಗಾಬರಿಯಿಂದ ‘ಡಾಕ್ಟ್ರೆ ನನ್ನ ತಾಯಿ ಜೋರಾಗಿ ಆಕಳಿಸಿದಾಗ ಬಾಯಿ ಜೋರಾಗಿ ತೆರೆದುಕೊಂಡು ಆ ಬಳಿಕ ಬಾಯಿ ಮುಚ್ಚಲು ಸಾಧ್ಯವಾಗುತ್ತಿಲ್ಲ’ ಎಂದು ಒಂದೇ ಉಸಿರಿನಿಂದ ಅರುಹಿದ. ಬಾಯಿಂದ ಜೊಲ್ಲುರಸ ಹರಿಯುತ್ತಿದೆ. ತಾಯಿ ನೋವಿನಿಂದ ಅಳುತ್ತಿದ್ದಾಳೆ ಎಂದಾಗ ನನಗೆ ಕರುಳು ಹಿಂಡಿದಂತಾಗಿತ್ತು. ನನ್ನ ಮನೆಯಿಂದ ನನ್ನ ಕ್ಲಿನಿಕ್‍ಗೆ 20 ಕಿ.ಮೀ. ದೂರವಿದೆ. ನನ್ನ ಮನೆ ಕರ್ನಾಟಕ ರಾಜ್ಯದ ಮಂಗಳೂರಿನಲ್ಲಿ ಇದ್ದರೆ ನನ್ನ ಕ್ಲಿನಿಕ್ ಕೇರಳದ ಕಾಸರಗೋಡಿನ ಮಂಜೇಶ್ವರ ಸಮೀಪ ಹೊಸಂಗಡಿಯಲ್ಲಿ ಇತ್ತು. ಕೋವಿಡ್-19 ರೋಗಿಗಳ ಸಂಖ್ಯೆ ತೀವ್ರವಾಗಿ ಜಾಸ್ತಿಯಾಗುತ್ತಿದ್ದ ಕಾರಣದಿಂದ ಮಂಗಳೂರು ಮತ್ತು ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಮುಚ್ಚಲ್ಪಟ್ಟಿತ್ತು. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಲು ಅನುಮತಿ ಇರಲಿಲ್ಲ. ಒಂದು ಕಡೆ ನೋವಿನಿಂದ ನರಳುತ್ತಿರುವ ರೋಗಿ ಇನ್ನೊಂದೆಡೆ ಕೋವಿಡ್-19 ರೋಗದಿಂದ ಉಂಟಾದ ಸಾಮಾಜಿಕ ಸಮಸ್ಯೆಗಳು ನನ್ನ ರೋಗಿಯ ಸಮಸ್ಯೆ ಔಷಧಿಯಿಂದ ಗುಣವಾಗುವುದಿಲ್ಲ ಎಂಬುದು ನನಗೆ ಮಾತ್ರ ಗೊತ್ತಿತ್ತು. ಜೋರಾಗಿ ಆಕಳಿಸಿದಾಗ ಆಕೆಯ ಕೆಳ ದವಡೆಯ ಕೀಲು ತನ್ನ ಸ್ವಸ್ಥಾನದಿಂದ ಹೊರಗೆ ಸ್ಥಾನಪಲ್ಲಟವಾಗಿತ್ತು. ಆ ಕಾರಣದಿಂದ ಆಕೆಗೆ ಬಾಯಿ ಮುಚ್ಚಲು ಸಾಧ್ಯವಾಗುತ್ತಿರಲಿಲ್ಲ. ಈ ಹಿಂದೆಯೂ ಆಕೆಗೆ ಈ ಸಮಸ್ಯೆ ಇತ್ತು. ಆಗ ನನ್ನಲ್ಲಿ ಬಂದು ಕ್ಷಣಾರ್ಧದಲ್ಲಿ ಸರಿಪಡಿಸಿಕೊಂಡು ನಗುನಗುತ್ತಾ ಮನೆಗೆ ಮರಳಿದ್ದರು. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿತ್ತು. ನಾನು ಗಡಿ ದಾಟಿ ಕ್ಲಿನಿಕ್‍ಗೆ ಹೋಗುವಂತಿರಲಿಲ್ಲ. ಫೋನಿನಲ್ಲಿ ಔಷಧಿ ನೀಡುವಂತೆ ಇರಲಿಲ್ಲ. ನಾನೇ ಹೋಗಿ ಆಕೆಯ ದವಡೆ ಸಕೀಲನ್ನು ಮೊದಲ ಜಾಗಕ್ಕೆ ಪುನರ್‍ಪ್ರತಿಷ್ಠಾಪನೆ ಮಾಡಲೇ ಬೇಕಾಗಿತ್ತು.
ನಾನು ನನ್ನ ರೋಗಿಯ ಮಗನಿಗೆ ತಾಯಿಯನ್ನು ಕರ್ನಾಟಕ ಮತ್ತು ಕೇರಳದ ಗಡಿ ಭಾಗವಾದ ತಲಪಾಡಿಗೆ ಬನ್ನಿ ಎಂದು ಮುಕ್ತ ಆಹ್ವಾನ ನೀಡಿದ್ದೆ. ನಾನು ಮಂಗಳೂರಿನಿಂದ ತಲಪಾಡಿಗೆ ಮತ್ತು ನನ್ನ ರೋಗಿ ಮಂಜೇಶ್ವರದಿಂದ ತಲಪಾಡಿಗೆ ಬಂದಲ್ಲಿ ಗಡಿಭಾಗದಲ್ಲಿಯೇ ನಿಂತು ಕ್ಷಣಾರ್ಧದಲ್ಲಿ ಸರಿಪಡಿಸುತ್ತೇನೆ ಎಂದು ಆಶ್ವಾಸನೆ ನೀಡಿದೆ. ಆಗ ಆ ರೋಗಿಯ ಮಗ ನನ್ನ ಸಂಬಂಧಿಕರ ಮನೆಯಲ್ಲಿ ಒಬ್ಬರು ದಂತ ವೈದ್ಯರಿದ್ದಾರೆ ಅವರಿಗೆ ಮಾತನಾಡಿ ಎಂದು ಮೊಬೈಲ್ ನಂಬರ್ ನೀಡಿದರು. ದುರಾದೃಷ್ಟವಶಾತ್ ಆಕೆ ದಂತ ವೈದ್ಯರಾಗಿದ್ದರೂ, ಈ ಚಿಕಿತ್ಸೆಯನ್ನು ಈವರೆಗೆ ನೀಡಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದರು. ಆಕೆಯ ಹೆಸರು ಡಾ|| ಫಾತಿಮಾ (ಹೆಸರು ಬದಲಾಯಿಸಲಾಗಿದೆ) ನಾನು ಆಕೆಗೆ ನೀವು ನಾನು ಹೇಳಿದಂತೆ ಮಾಡಿ ಒಂದೆರಡು ನಿಮಿಷದಲ್ಲಿ ಸರಿ ಮಾಡಬಹುದು ಎಂದು ಧೈರ್ಯ ತುಂಬಿದೆ. ವಾಟ್ಸಾಪ್‍ನಲ್ಲಿ ವಿಡಿಯೋ ಕಾಲ್ ಮಾಡಿದರೆ ನಾನು ಹೇಗೆ ಮಾಡುವುದು ಎಂದು ನಾನು ಹೇಳುತ್ತೇನೆ. ಅದೇ ರೀತಿ ನೀವು ಮಾಡಿದರೆ ಸರಿಪಡಿಸಬಹುದು ಎಂದು ಹೇಳಿದಾಗ ಆಕೆ ಪ್ರಯತ್ನಿಸುತ್ತೇನೆ ಎಂದು ನುಡಿದರು. ತಕ್ಷಣವೇ ನನ್ನ ರೋಗಿ ತನ್ನ ಮಗನೊಂದಿಗೆ ಆ ದಂತ ವೈದ್ಯರಲ್ಲಿಗೆ ತೆರಳಿದರು. ನಾನು ನನ್ನ ಯುವದಂತ ವೈದ್ಯೆಗೆ ಯಾವ ಜಾಗದಲ್ಲಿ ಹೇಗೆ ನಿಲ್ಲಬೇಕು, ಯಾವ ರೀತಿ ಕೆಳಗಿನ ದವಡೆಯನ್ನು ಮೊದಲಿನ ಜಾಗಕ್ಕೆ ತರಬೇಕು ಎಂದು ತಿಳಿಸಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ರೋಗಿಯನ್ನು ಭದ್ರವಾಗಿ ಕುಳ್ಳಿರಿಸಿ ಬೆನ್ನಿನ ಜಾಗಕ್ಕೆ ಆಧಾರ ನೀಡಿ ವೈದ್ಯರು ರೋಗಿಯ ಮುಂಭಾಗದಲ್ಲಿ ನಿಲ್ಲುತ್ತಾರೆ. ರೋಗಿಯ ತಲೆಯನ್ನು ಸಹಾಯಕರು ಗಟ್ಟಿಯಾಗಿ ಅಲುಗಾಡದಂತೆ ಹಿಡಿಯುತ್ತಾರೆ. ವೈದ್ಯರು ರೋಗಿಯ ಕೆಳಭಾಗದ ದವಡೆಯನ್ನು ಮೊದಲು ಕೆಳಮುಖವಾಗಿ ನಂತರ ಹಿಮ್ಮುಖವಾಗಿ ಮತ್ತು ಕೊನೆಗೆ ಮೇಲ್ಮುಖವಾಗಿ ತಳ್ಳುತ್ತಾರೆ. ಆಗ ಕೆಳಗಿನ ದವಡೆಯ ಕೀಲು ಸ್ವಸ್ಥಾನಕ್ಕೆ ಮರಳುತ್ತದೆ. ಈ ರೀತಿ ಮಾಡಲು ಯಾವುದೇ ಅರಿವಳಿಕೆ ಅಗತ್ಯವಿರುವುದಿಲ್ಲ. ವೈದ್ಯರು ಸಾವಧಾನತೆಯಿಂದ ಧೈರ್ಯವಾಗಿ ಒಂದೆರಡು ನಿಮಿಷದಲ್ಲಿ ಮಾಡುವ ಪ್ರಕ್ರಿಯೆ ಇದಾಗಿರುತ್ತದೆ. ನಾನು ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ನಮ್ಮ ಯುವ ವೈದ್ಯೆಗೆ ಸೂಕ್ತ ವಿವರಣೆ ನೀಡಿದಾಗ ಆಕೆ ಯಾವುದೇ ಭಯವಿಲ್ಲದೆ ಕೆಳಗಿನ ದವಡೆಯನ್ನು ಮೂಲಸ್ಥಾನಕ್ಕೆ ತಳ್ಳಲು ಪ್ರಯತ್ನಿಸಿದರು. ಮೊದಲ ಪ್ರಯತ್ನ ವಿಫಲವಾದರೂ ಮಗದೊಮ್ಮೆ ಆಕೆಗೆ ಆತ್ಮವಿಶ್ವಾಸ ತುಂಬಿ ಮತ್ತೊಮ್ಮೆ ಪ್ರಯತ್ನಿಸಲು ನಾನು ಆದೇಶಿಸಿದೆ. ಈ ಬಾರಿ ಆಕೆ ಯಾವುದೇ ಅಳುಕು ಮತ್ತು ತೊಡಕು ಇಲ್ಲದೆ, ಕೆಳಗಿನ ದವಡೆಯ ಕೀಲನ್ನು ಮೂಲಸ್ಥಾನಕ್ಕೆ ಹಿಂತಿರುಗಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. 80ರ ಹರೆಯದ ರೋಗಿ ತನ್ನ ಬಾಯಿಮುಚ್ಚಲು ಸಾಧ್ಯವಾಯಿತು. ಆಕೆಯ ಕಣ್ಣಿನಿಂದ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಅದು ಬರೀ ನೋವಿನಿಂದ ಬಂದ ಕಣ್ಣೀರು ಆಗಿರಲಿಲ್ಲ. ಅದೊಂದು ನೋವು ಸಂತಸ ಎರಡೂ ಮಿಶ್ರಿತ ಆನಂದಭಾಷ್ಪವಾಗಿತ್ತು. ಆ ಮಹಾತಾಯಿ ಎರಡೂ ಕೈಗಳಿಂದ ಆ ಯುವ ದಂತ ವೈದ್ಯೆಯನ್ನು ಹರಸಿದಾಗ ನನ್ನ ಶ್ರಮ ಸಾರ್ಥಕವಾಗಿತ್ತು. ನಮ್ಮ ಜಂಟಿ ಆಪರೇಷನ್ ಯಶಸ್ಸಿನಲ್ಲಿ ಪರ್ಯವÀಸಾನವಾಗಿತ್ತು. ಬರೀ ಫೋನಿನಲ್ಲಿ ಔಷಧಿ ನೀಡಿ ಬೇಸತ್ತಿದ್ದ ನನಗೂ ಒಂದು ರೀತಿಯ ಹೊಸ ಅನುಭವ ಇದಾಗಿತ್ತು. ಈ ಘಟನೆ ನಡೆದು ಮತ್ತೆರಡು ತಿಂಗಳು ಕಳೆದು ನನ್ನ ಚಿಕಿತ್ಸಾಲಯ ಎಂದಿನಂತೆ ಸಾರ್ವಜನಿಕರ ಸೇವೆಗೆ ತೆರೆದುಕೊಂಡಿತ್ತು. ಆ ರೋಗಿಯ ಮಗ ಖಾಲಿ ಚೆಕ್ಕಿನ ಹಾಳೆಯನ್ನು ಸಹಿ ಹಾಕಿ ನೀಡಿ ಎಷ್ಟು ಬೇಕಾದರೂ ಹಾಕಿಕೊಳ್ಳಿ ಎಂದಾಗ ನಾನು ವಿನಮ್ರವಾಗಿ ತಿರಸ್ಕರಿಸಿದೆ. ಪ್ರತಿ ವೈದ್ಯರೂ ತಮ್ಮ ವೃತ್ತಿಯ ರಾಜಧರ್ಮವನ್ನು ಪಾಲಿಸಲೇಬೇಕಾಗುತ್ತದೆ. ಎಲ್ಲಾ ವೈದ್ಯರು ಎಲ್ಲಾ ಚಿಕಿತ್ಸೆಗಳನ್ನು ಬರೀ ದುಡ್ಡಿಗಾಗಿ ಮಾಡುವುದಿಲ್ಲ. ವೈದ್ಯರಿಗೂ ಸಾಮಾಜಿಕ ಭದ್ಧತೆ ಹೊಣೆಗಾರಿಕೆ ಮತ್ತು ವೃತ್ತಿ ಜೀವನ ಸಾರ್ಥಕತೆಯನ್ನು ಅನುಭವಿಸುವ ಹಕ್ಕು ಇದೆ. ಎಂಬ ಸಂದೇಶವನ್ನು ರೋಗಿಗಳಿಗೆ ಸಮಾಜಕ್ಕೆ ನೀಡುವ ಉದ್ದೇಶ ನನ್ನ ಆ ನಿರ್ಧಾರದ ಹಿಂದೆ ಅಡಗಿತ್ತು. ಈ ವಿಚಾರವನ್ನು ಎಲ್ಲಾ ರೋಗಿಗಳು ಅರಿತು ನಿಭಾಯಿಸಿದಲ್ಲಿ ವೈದ್ಯ ಮತ್ತು ರೋಗಿಯ ಸಂಬಂಧ ಮತ್ತಷ್ಟು ಗಟ್ಟಿಯಾಗುವುದಸಸರಲ್ಲಿ ಸಂದೇಹವೇ ಇಲ್ಲ.
ಡಾ|| ಮುರಲೀ ಮೋಹನ್ ಚೂಂತಾರು