ಶಂಕು ಹುಳುಗಳು – ನಿರ್ವಹಣೆ ಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು ಆ. 13,  ಪ್ರಾಣಿ ಪ್ರಪಂಚದ ಕೀಟಗಳ ನಂತರ ಅತೀ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಶಂಕು ಹುಳುಗಳು ಮಣ್ಣು ಹಾಗೂ ನೀರಿನಲ್ಲಿ ವಾಸವಾಗಿರುತ್ತವೆ. ತರಕಾರಿ, ನೆಡುತೋಪು ಬೆಳೆಗಳು, ಅರಣ್ಯ ಹಾಗೂ ಹೊಲದ ಬೆಳೆಗಳನ್ನು ತಿಂದು ನಾಶ ಮಾಡುತ್ತಿರುತ್ತವೆ. ಈ ಹುಳುವಿನ ಚಟುವಟಿಕೆ ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಹೆಚ್ಚಿರುತ್ತದೆ. ಹಗಲಿನ ವೇಳೆಯಲ್ಲಿ ಎಲೆ ಮತ್ತು ಕಲ್ಲುಗಳ ಕೆಳಗೆ ಅವಿತುಕೊಳ್ಳುತ್ತವೆ. ರಾತ್ರಿಯ ವೇಳೆ ಫ್ರೌಢಾವಸ್ಥೆಯ ಹುಳುಗಳು ಹೊರಬಂದು ಹಣ್ಣು ಮತ್ತು ತರಕಾರಿಗಳನ್ನು ತಿಂದು ಹಾನಿ ಮಾಡುತ್ತವೆ. ಕೆಲವೊಮ್ಮೆ ತುಂತುರು ಮಳೆ ಹಾಗೂ ಮಂದ ಸೂರ್ಯನ ಪ್ರಕಾಶದಲ್ಲಿ ಹಗಲಿನ ವೇಳೆಯಲ್ಲೂ ಇವುಗಳ ಬಾಧೆಯನ್ನು ಕಾಣಬಹುದು.


ನಿರ್ವಹಣೆ ಕ್ರಮ : ತೋಟದಲ್ಲಿ ಕಳೆಗಿಡಗಳನ್ನು ತೆಗೆದು ಸ್ವಚ್ಛತೆಯನ್ನು ಕಾಪಾಡುವುದು. ಪ್ರಾರಂಭದ ಹಂತಗಳಲ್ಲಿ ಹುಳುಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ ಸುಣ್ಣ ಸಿಂಪಡಿಸುವುದರಿಂದ ನಾಶಪಡಿಸಬಹುದು. ಹಸಿ ಗೋಣಿ ಚೀಲಗಳನ್ನು ತೋಟದಲ್ಲಿ ಅಲ್ಲಲ್ಲಿ ಇಡುವುದರಿಂದ ಹುಳುಗಳು ಚೀಲದ ಕೆಳಗೆ ಅವಿತುಕೊಳ್ಳುತ್ತವೆ. ಹೀಗೆ ಸಂಗ್ರಹಿಸಿದ ಹುಳುಗಳನ್ನು ಉಪ್ಪು ಅಥವಾ ಕಾಪರ್ ಸಲ್ಫೇಟ್ ಹಾಕಿ ನಾಶಪಡಿಸಬಹುದು.
ರಾಸಾಯನಿಕವಾಗಿ : ಮೆಟಾಲ್ಡಿಹೈಡ್ ರಾಸಾಯನಿಕ ಪೀಡೆನಾಶಕದ ಸಣ್ಣ ಸಣ್ಣ ತುಣುಕುಗಳನ್ನು ಹೊಲದಲ್ಲಿ ಅಲ್ಲಲ್ಲಿ ಚೆಲ್ಲಿದಾಗ ಹುಳುಗಳು ಆಕರ್ಷಣೆಗೊಂಡು ಕೀಟನಾಶಕಗಳನ್ನು ತಿನ್ನುವುದರಿಂದ ಹುಳುಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.
ವಿಶೇಷ ಸೂಚನೆ : ಯಾವುದೇ ರಾಸಾಯನಿಕದಿಂದ ಈ ಹುಳುಗಳು ಸತ್ತಿದ್ದು ಕಂಡುಬಂದಲ್ಲಿ ತಕ್ಷಣ ಅವುಗಳನ್ನು ಆರಿಸಿ ಆಳವಾಗಿ ನೆಲದಲ್ಲಿ ಹೂಳಬೇಕು. ಇಲ್ಲದಿದ್ದರೆ ಸಾಕು ಪ್ರಾಣಿಗಳು ಹೀಗೆ ಸತ್ತಿರುವ ಶಂಕುಹುಳುಗಳನ್ನು ತಿನ್ನುವುದರಿಂದ ಅವುಗಳಿಗೆ ತೊಂದರೆಯಾಗಬಹುದು. ಶಂಕುಹುಳಗಳು ನಿಸರ್ಗದಲ್ಲಿ ಶೇ.75 ರಿಂದ 80 ರಷ್ಟು ತಮ್ಮ ಆಹಾರವನ್ನು ಕೊಳೆಯುತ್ತಿರುವ ಪ್ರಾಣಿ ಮತ್ತು ಸಸ್ಯಜನ್ಯ ಪದಾರ್ಥಗಳನ್ನು ತಿಂದು ನಿಸರ್ಗದಲ್ಲಿ ಸಮತೋಲನವನ್ನು ಕಾಪಾಡುತ್ತವೆ. ಇಂತಹ ಸಂದರ್ಭದಲ್ಲಿ ಬೆಳೆಗಳ ಮೇಲೆ ಹಾವಳಿಯಿದ್ದಾಗ ಮಾತ್ರ ಹತೋಟಿ ಕ್ರಮ ಕೈಗೊಂಡು ನಿಸರ್ಗದ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ರಿಶಲ್ ಡಿಸೋಜ, ತೋಟಗಾರಿಕೆ ವಿಷಯತಜ್ಞರು, ಮಂಗಳೂರು ದೂರವಾಣಿ ಸಂಖ್ಯೆ: 8277806372 ಸಂಪರ್ಕಿಸಬಹುದು ಎಂದು ಮಂಗಳೂರು ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

 

error: Content is protected !!

Join the Group

Join WhatsApp Group