(ನ್ಯೂಸ್ ಕಡಬ) newskadaba.com.ಬಡಗನ್ನೂರು,ಆ.13: ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಪಟ್ಟೆಯಿಂದ ಗೆಜ್ಜೆಗಿರಿ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕ ಕಲ್ಪಿಸುವ ಜಿ.ಪಂ. ರಸ್ತೆಯ ಪಟ್ಟೆ ಎಂಬಲ್ಲಿ ಸೀರೆ ಹೊಳೆಗೆ ನಿರ್ಮಿಸಿದ ಸೇತುವೆಯ ಒಂದು ಬದಿ ಬಿರುಕು ಬಿಟ್ಟು ಕುಸಿತದ ಭೀತಿಯಲ್ಲಿದೆ.
ಗೆಜ್ಜೆಗಿರಿ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭ ಪಟ್ಟೆಯಿಂದ ಗೆಜ್ಜೆಗಿರಿ ತನಕ ರಸ್ತೆ ವಿಸ್ತರಣೆ ಮತ್ತು ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು. ಪಟ್ಟೆಯಲ್ಲಿ ಸೀರೆ ಹೊಳೆಯ ಸೇತುವೆಯ ಒಂದು ಬದಿಗೆ ಕಾಂಪೌಂಡ್ ಹಾಗೂ ಇನ್ನೊಂದು ಬದಿಗೆ ತಡೆಗೋಡೆ ನಿರ್ಮಿಸಲಾಗಿತ್ತು.ಆದರೆ ಇದೀಗ ತಡೆಗೋಡೆ ಕುಸಿತದ ಭೀತಿಯಲ್ಲಿದೆ. ಪಟ್ಟೆ ಸಮೀಪ ಹೊಳೆ ಪಕ್ಕದ ತಿರುವು ಭಾಗದಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಅಸಮರ್ಪಕ ಕಾಮಗಾರಿಯೇ ಕಾಂಕ್ರೀಟ್ ರಸ್ತೆ ಬಿರುಕು ಬಿಡಲು ಕಾರಣ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.
ಸೇತುವೆಗೆ ಅಳವಡಿಸಿದ್ದ ಕಾಂಕ್ರೀಟ್ ಒಂದು ಭಾಗ ತುಂಡಾಗಿದ್ದು, ರಾಡ್ ಕಾಣುತ್ತಿದೆ. ತಡೆಗೋಡೆಯ ಮೇಲೆ ಅಳವಡಿಸಲಾಗಿದ್ದ ಕಬ್ಬಿಣದ ತಡೆಬೇಲಿಯ ಆಧಾರದಲ್ಲಿ ನಿಂತಿದೆ. ಮುನ್ನೆಚ್ಚರಿಕ ಕ್ರಮವಾಗಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.