(ನ್ಯೂಸ್ ಕಡಬ) newskadaba.com ಕಡಬ: ಆ.12,.ಕೊರೊನಾ ಪರಿಣಾಮ ಶಾಲೆಗಳನ್ನು ತೆರೆಯಲು ಅಸಾಧ್ಯವಾದ ಈ ಸಂದರ್ಭದಲ್ಲಿ ಕಡಬ ತಾಲೂಕಿನ ನೂಜಿಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ ಹೇಳಿ ಕೊಡುತ್ತಿದ್ದಾರೆ.
ನೂಜಿಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯ ಶಾಲೆಯ ಮಕ್ಕಳನ್ನು ಒಟ್ಟು ಸೇರಿಸಿ, ಊರಿನ ದೇವಸ್ಥಾನ, ಚರ್ಚ್, ಮಸೀದಿ, ಮಂದಿರ, ಯುವಕ ಮಂಡಲಗಳ ಕಟ್ಟಡಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಕಲಿಸಲಾಗುತ್ತಿದೆ. ಇದಕ್ಕೆ ಮಕ್ಕಳು, ಪೋಷಕರು ಸಹಕಾರ ನೀಡುತ್ತಿದ್ದು, ಉತ್ತಮ ರೀತಿಯಲ್ಲಿ ಕಲಿಕೆ ಸಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೂಜಿಬಾಳ್ತಿಲ ಗ್ರಾಮೀಣ ಭಾಗವಾಗಿದ್ದು, ಕೃಷಿ, ಕೂಲಿ ಮಾಡಿಕೊಂಡು ಜೀವನ ನಡೆಸುವವರೇ ಅಧಿಕ ಮಂದಿ. ಅನ್‍ಲೈನ್ ಶಿಕ್ಷಣಕ್ಕೆ ನೆಟ್‍ವರ್ಕ್ ಸಮಸ್ಯೆ ಇರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲು ಶಿಕ್ಷಕರೇ ಮಕ್ಕಳ ಬಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ.
ಶಿಕ್ಷಕರೇ ಮಕ್ಕಳ ಬಳಿಗೆ ತೆರಳಿ ಪಾಠ ಹೇಳುವ ಕಾರ್ಯಕ್ಕೆ ಉತ್ತಮ ಸ್ಪಂಧನೆ ದೊರೆಯುತ್ತಿದೆ. ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ, ನೂಜಿ ಅಂಗನವಾಡಿ, ರೆಂಜಿಲಾಡಿ ಖಾಸಗಿ ಕಟ್ಟಡ, ಮೀನಾಡಿ ಮಸೀದಿ, ಬದಿಬಾಗಿಲು ಅಂಗನವಾಡಿ, ನೂಜಿಬಾಳ್ತಿಲ ಚರ್ಚ್, ಅಡೆಂಜ ದೇವಸ್ಥಾನ, ಮನೆ, ಇಚ್ಲಂಪಾಡಿ ಭಜನಾ ಮಂದಿರ, ದೇವಸ್ಥಾನಗಳಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಜತೆಗೆ ಆನ್‍ಲೈನ್ ಶಿಕ್ಷಣವೂ ನಡೆಸಲಾಗುತ್ತಿದೆ.
ನೂಜಿಬಾಳ್ತಿಲ ವ್ಯಾಪ್ತಿಯ 8 ಶಾಲೆಗಳ 618 ವಿದ್ಯಾರ್ಥಿಗಳು, 34 ಶಿಕ್ಷಕರು ತೊಡಗಿಕೊಂಡಿದ್ದಾರೆ. 20 ಮಕ್ಕಳ ಗುಂಪುಗಳಂತೆ ಮಾಡಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಊರವರು ಕೂಡ ಸಹಕಾರ ನೀಡುತ್ತಿದ್ದು, ಮ್ಕಕಳಿಗೆ ಬಿಸಿ ನೀರು ಕುಳಿತುಕೊಳ್ಳಲು ಚಾಪೆ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದಾರೆ.
ಆನ್‍ಲೈನ್ ಶಿಕ್ಷಣ ಎಲ್ಲರಿಗೂ ಕಷ್ಟಸಾಧ್ಯವಾಗಿದ್ದು, ಕೆಲ ಸಮಸ್ಯೆಗಳು ಇದಕ್ಕೆ ತೊಡಕಾಗಿದೆ. ಇಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಂಡು ಶಿಕ್ಷಣ ಕೊಡಲಾಗುತ್ತಿದೆ. ಮನೆ ಪಾಠ ಕಾರ್ಯಕ್ರಮಕ್ಕೆ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂಧ, ಶಾಲಾಭಿವೃದ್ಧಿ ಸಮಿತಿ, ಪೋಷಕರು ಉತ್ತಮವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ನೂಜಿಬಾಳ್ತಿಲ ಸಿಆರ್‍ಪಿ ಗೋವಿಂದ ತಿಳಿಸಿದ್ದಾರೆ.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಲೋಕೇಶ್ ಮಾತನಾಡಿ ನೂಜಿಬಾಳ್ತಿಲದಲ್ಲಿ ಮನೆ ಮನೆ ಪಾಠ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಕ್ಲಸ್ಟರ್ ವ್ಯಾಪ್ತಿಯ ಎಲ್ಲರೂ ವಿಶೇಷ ರೀತಿಯಲ್ಲಿ ಮಕ್ಕಳಿಗೆ ಚಟುವಟಿಕೆ, ನೋಟ್ಸ್ ನೀಡಿ ಪಾಠ ಮಾಡುತ್ತಿದ್ದಾರೆ ಎಂದರು.