(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ,12: ಇಲ್ಲಿನ ಸೇನಾ ಆರ್ ಆಯಂಡ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ದೇಹಸ್ಥಿತಿ ಮತ್ತಷ್ಟು ವಿಷಮಿಸಿದ್ದು, ಅವರು ವೆಂಟಿಲೇಟರ್ ಬೆಂಬಲ ವ್ಯವಸ್ಥೆಯಲ್ಲೇ ಇದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಸೋಮವಾರ ಗಂಭೀರ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ತಪಾಸಣೆ ನಡೆಸಿದಾಗ ಮೆದುಳಿನಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಕಂಡುಬಂದಿದ್ದು, ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆ ಹೇಳಿದೆ.
ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ಕೂಡಾ ದೃಢಪಟ್ಟಿತ್ತು. ಶಸ್ತ್ರಚಿಕಿತ್ಸೆ ಬಳಿಕ ಅವರ ಸ್ಥಿತಿ ಗಂಭೀರವಾಗಿಯೇ ಇದ್ದು, ವೆಂಟಿಲೇಟರ್ ಬೆಂಬಲ ವ್ಯವಸ್ಥೆಯಲ್ಲಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಸರಿಪಡಿಸಲು ಆ. 10ರಂದು ನಡೆಸಿದ ಜೀವರಕ್ಷಕ ತುರ್ತು ಶಸ್ತ್ರಚಿಕಿತ್ಸೆ ಬಳಿಕ ಕೂಡಾ ಆರೋಗ್ಯಸ್ಥಿತಿ ಸುಧಾರಿಸಿಲ್ಲ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ. ಇದೀಗ ಕೋವಿಡ್-19 ಸೋಂಕಿನಿಂದಾಗಿ ಆರೋಗ್ಯ ಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಮೆದುಳಿನಲ್ಲಿ ಇನ್ನೂ ರಕ್ತಸ್ರಾವ ಇದೆ. ರಕ್ತ ತೆಳುವಾಗಲು ಮುಖರ್ಜಿ ಧೀರ್ಘಕಾಲದಿಂದ ಸೇವಿಸುತ್ತಿದ್ದ ಔಷಧಿ ಇದಕ್ಕೆ ಕಾರಣ ಇರಬಹುದು. ಅವರ ಆರೋಗ್ಯ ಸ್ಥಿತಿ ಸುಧಾರಿಸಬೇಕಾದರೆ ಮೆದುಳಿನ ಸ್ರಾವ ನಿಲ್ಲಬೇಕು ಎಂದು ಮೂಲಗಳು ಹೇಳಿವೆ.