15 ದಿನದೊಳಗೆ ಮರಳು ಸ್ಥಳಗಳನ್ನು ಗುರುತಿಸಿ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.11:   ಹಳ್ಳ, ತೊರೆಗಳಲ್ಲಿರುವ ಮರಳನ್ನು ತೆಗೆಯುವ ಸಲುವಾಗಿ ಮುಂದಿನ 15 ದಿನಗಳೊಳಗೆ ಮರಳು ಸಿಗುವ ಇಂತಹ ಸ್ಥಳಗಳನ್ನು ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಹಶೀಲ್ದಾರ್ ನೇತೃತ್ವದಲ್ಲಿ ಲೋಕೋಪಯೋಗಿ, ಅರಣ್ಯ, ಗಣಿ ಇಲಾಖೆ ಅಧಿಕಾರಿಗಳು, ಪಿ.ಡಿ.ಓ. ಗಳ ಜಂಟೀ ತಂಡ ಸ್ಥಳ ಪರಿಶೀಲನೆ ಮಾಡಿ ಜಿಲ್ಲಾ ಸಮಿತಿಗೆ ವರದಿ ನೀಡಬೇಕು. ಜಂಟಿ ಸ್ಥಳ ಪರಿಶೀಲನಾ ವರದಿಯನ್ನು ತಾಲೂಕು ಮರಳು ಸಮಿತಿಯ ಶಿಫಾರಸ್ಸಿನೊಂದಿಗೆ ಸಲ್ಲಿಸುವಂತೆ ಸೂಚಿಸಿದ ಸಚಿವರು, ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

 

ಮರಳನ್ನು ಸಾಗಿಸಲು ಟ್ರಾಕ್ಟರ್, ಎತ್ತಿನಗಾಡಿಗಳಂತಹ ಲಘು ವಾಹನಗಳನ್ನು ಬಳಸಲು ಮರಳು ನೀತಿಯಲ್ಲಿ ಅವಕಾಶವಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ವಾಹನಗಳ ಬಳಕೆ ಕಡಿಮೆ ಇರುವುದರಿಂದ ಇದರ ಬದಲು 407 ಮಿನಿ ಲಾರಿ, ಲಘು ಟಿಪ್ಪರ್‍ಗಳಂತಹ ವಾಹನಗಳಲ್ಲಿ ಮರಳು ಕೊಂಡೊಯ್ಯಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಹೊಳೆ, ನದಿಗಳಲ್ಲಿ ಲಭ್ಯವಿರುವ ಮರಳಿನ ಗಣಿಗಾರಿಕೆ ಮಾಡಲು ಕರ್ನಾಟಕ ರಾಜ್ಯ ಮಿನರಲ್ ಕಾರ್ಪೋರೇಶನ್ ಅವರಿಗೆ ಅಧಿಕಾರ ನೀಡಲಾಗುವುದು. ಈಗಾಗಲೇ ಗುರುತಿಸಲಾಗಿರುವ 30 ಬ್ಲಾಕ್‍ಗಳನ್ನು ಅವರಿಗೆ ವಹಿಸಲಾಗುವುದು. ಅದೇ ರೀತಿ ಅಣೆಕಟ್ಟು, ಜಲಾಶಯ, ಡ್ಯಾಂಗಳ ವ್ಯಾಪ್ತಿಯಲ್ಲಿ ಹಾಗೂ ಹಿನ್ನೀರಿನ ಪ್ರದೇಶಗಳಲ್ಲಿ ಲಭ್ಯವಿರುವ ಮರಳನ್ನು ಗುರುತಿಸಲು ಅಧಿಕಾರಿಗಳ ತಂಡ ಜಂಟೀ ಪರಿಶೀಲನೆ ನಡೆಸಿ ವರದಿ ನೀಡಲು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Also Read  ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ನಾಳೆ ಕರ್ನಾಟಕ ಬಂದ್

 

 

ಸಾರ್ವಜನಿಕರಿಗೆ ಮರಳನ್ನು ಒಂದು ಟನ್ ಗೆ ರೂ.700ರಂತೆ ಮಾರಾಟ ದರ ನಿಗದಿಪಡಿಸಲಾಗಿದೆ.ಈ ದರವನ್ನು ಇನ್ನಷ್ಟು ಕಡಿಮೆ ಮಾಡಲು ಚಿಂತಿಸಲಾಗಿದೆ. ಪ್ರಸಕ್ತ ಶ್ರೇಣಿ 1,2,3ರಲ್ಲಿರುವ ಮರಳನ್ನು ಗ್ರಾಮ ಪಂಚಾಯತಿಗಳ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡಲು ಚಿಂತಿಸಲಾಗಿದೆ. ನಗರ ಪ್ರದೇಶಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಈ ಅನುಮತಿ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಸೂಚಿಸಿದರು. ಸಿಆರ್‍ಝಡ್ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 14 ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿದೆ.ಈ ಸಂಬಂಧ ಗಣಿ ಸಚಿವರ ಅಧ್ಯಕ್ಷತೆಯಲ್ಲಿ 3-4 ದಿನಗಳಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ರೂಪಾ, ಡಿಸಿಪಿ ಅರುಣಾಂಶು ಗಿರಿ, ಗಣಿ ಇಲಾಖೆ ಉಪನಿರ್ದೇಶಕ ರಾಂಜಿ ನಾಯ್ಕ್ ಮತ್ತಿತರರು ಇದ್ದರು.

Also Read  ಸುಬ್ರಹ್ಮಣ್ಯ: ಕೆ.ಎಸ್.ಎಸ್ ಕಾಲೇಜಿನಲ್ಲಿ ಆತ್ಮನಿರ್ಭರ ಭಾರತ ಉದ್ಯೋಗ ನೈಪುಣ್ಯ ಶಿಬಿರ ಸಮಾಪನ

 

error: Content is protected !!
Scroll to Top