(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ, ಆ.08: ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್ ಕಳೆದ ವರ್ಷದಂತೆ ಮಹಾಕುಸಿತಕ್ಕೆ ತುತ್ತಾಗುವ ಭೀತಿ ಎದುರಾಗಿದೆ. ಕೆಲದಿನಗಳಿಂದ ಘಾಟಿಯ ಕೆಲವೆಡೆ ಸಣ್ಣಪ್ರಮಾಣದಲ್ಲಿ ಕುಸಿತ ಆರಂಭಗೊಂಡಿದ್ದು, ಈಗ ಅಲೆಕಾನ್ ಪ್ರದೇಶದ ಹತ್ತಿರ ರಾಷ್ಟ್ರೀಯ ಹೆದ್ದಾರಿಯೇ ಬಿರುಕು ಬಿಟ್ಟಿದೆ.
ಮಲಯಮಾರುತ, ನಾಲ್ಕನೇ ತಿರುವು ಹಾಗೂ ಅಣ್ಣಪ್ಪ ಬೆಟ್ಟ- ಅಲೆಕಾನ್ ನಡುವೆ ಕೆಲದಿನಗಳಿಂದ ರಸ್ತೆ ಬದಿ ಗುಡ್ಡ ಸಣ್ಣ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಶುಕ್ರವಾರ ಅಲೆಕಾನ್ ಸಮೀಪ ದರೆ ಕುಸಿದು ರಸ್ತೆಗೆ ಕಲ್ಲುಮಣ್ಣು ಮರ ಸಮೇತ ಬಿದ್ದಿದ್ದರಿಂದ ಆಂಬುಲೆನ್ಸ್ ಸಹಿತ ಅನೇಕ ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡಿದ್ದವು. ಮಣ್ಣು ತೆರವುಗೊಳಿಸಿದ ಬಳಿಕ ಚಾರ್ಮಾಡಿ- ಚಿಕ್ಕಮಗಳೂರು ರಸ್ತೆ ಬಂದ್ ಮಾಡಲಾಯಿತು. ಚಾರ್ಮಾಡಿ (ದಕ್ಷಿಣ ಕನ್ನಡ) ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಘಾಟಿ ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ ತಡೆಹಿಡಿದಿದ್ದಾರೆ. ನಿರಂತರ ಮಳೆಗೆ ಮಣ್ಣು ಸಡಿಲಗೊಂಡಿದ್ದರಿಂದ ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳ ಮೇಲೆ ಹೆಚ್ಚಿನ ಗಮನ ಇರಿಸುವಂತೆ ಅರಣ್ಯ ಇಲಾಖೆಗೂ ಜಿಲ್ಲಾಡಳಿತ ಸೂಚನೆ ಇದೆ.