(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.03: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟ ಬೆನ್ನಲ್ಲೇ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರಿಗೂ ಆತಂಕ ಎದುರಾಗಿದೆ. ಕಳೆದ ಮೂರು ದಿನಗಳಿಂದ ಯಡಿಯೂರಪ್ಪ, ಶಾಸಕರ ಸಭೆ ನಡೆಸಿದ್ದರು. ಹಲವಾರು ಶಾಸಕರು ಹಾಗೂ ಸಚಿವರು ಸಿಎಂ ಭೇಟಿಯಾಗಿ ನೇರ ಮಾತುಕತೆ ನಡೆಸಿದ್ದರು.
ಕಳೆದ ಒಂದು ವಾರದಲ್ಲಿ ಸಿಎಂ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ನೂರಾರು ಮಂದಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಅಶ್ವತ್ಥ ನಾರಾಯಣ್, ವಸತಿ ಸಚಿವ ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಹಲವು ಸಚಿವರ ಜೊತೆ ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದರು.ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಲವು ಅಧಿಕಾರಿಗಳ ಜತೆಯೂ ನಿರಂತರ ಚರ್ಚೆ ನಡೆಸಿದ್ದರು.
- ಮೊನ್ನೆಯಷ್ಟೇ ರಾಜ್ಯಪಾಲರನ್ನು ಭೇಟಿಯಾಗಿ ಹೂಗುಚ್ಛ ನೀಡಿ ಶುಭಕೋರಿದ್ದರು.ನೂತನ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ ಹಾಗೂ ಸಾಬಣ್ಣ ತಳವಾರರಿಗೆ ಶಾಲು ಹೊದಿಸಿ ಸನ್ಮಾನಿಸಿ ಹೂಗುಚ್ಛ ನೀಡಿ ಶುಭಾಶಯ ಕೋರಿ ಬಂದಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೇರಿದಂತೆ ಹಲವರು ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಅಧ್ಯಕ್ಷ ಡಾ. ಕೆ.ಕಸ್ತೂರಿ ರಂಗನ್ ಅವರನ್ನೂ ಭೇಟಿಯಾಗಿ ಹೂಗುಚ್ಚ ನೀಡಿ ಶುಭಕೋರಿದ್ದ ಬಿಎಸ್ವೈ.ಹೀಗೆ ಕಳೆದ ಮೂರು ದಿನಗಳಲ್ಲಿ ಹಲವು ಪ್ರಮುಖರನ್ನ ಯಡಿಯೂರಪ್ಪ ಭೇಟಿ ಮಾಡಿದ್ದರು. ಈಗ ಈ ಎಲ್ಲಾ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಕೊರೊನಾ ಟೆಸ್ಟ್ಗೆ ಒಳಗಾಗಬೇಕಿದೆ. ಮುಖ್ಯಮಂತ್ರಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಗಣ್ಯರು ಕ್ವಾರಂಟೀನ್ಗೆ ಒಳಗಾಗುವ ಸಾಧ್ಯತೆ ಇದೆ. ಯಡಿಯೂರಪ್ಪ ಕಚೇರಿಯ ಹೆಚ್ಚುವರಿ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಪ್ತ ಕಾರ್ಯದರ್ಶಿಗಳು ಈಗಾಗಲೇ ಕ್ವಾರಂಟೀನ್ ಆಗಿದ್ದಾರೆ ಎಂದು, ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.