ಮಂಗಳೂರಿನ ಸೂಸೈಡ್ ಬ್ರಿಡ್ಜ್​ಗೆ ಕೊನೆಗೂ ತಡೆಗೋಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ 01: ಮಂಗಳೂರಿನ ಸೂಸೈಡ್ ಬ್ರಿಡ್ಜ್ ಎಂದೇ ಕುಖ್ಯಾತಿ ಗಳಿಸಿದ ಮಂಗಳೂರು-ತೊಕ್ಕೊಟ್ಟು ನಡುವಿನ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ ಹಾಕಲಾಗಿದೆ. ಬಹುಕೋಟಿ ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದ ಸೇತುವೆಗೆ ತಡೆಬೇಲಿ ಭಾಗ್ಯ ಒದಗಿಬಂದಿದೆ. ಸೇತುವೆಯ ಉದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ವರ್ಷ ಕಳೆದಿದೆ.

 

 

 

 

ಇಲ್ಲಿ ಸಿದ್ದಾರ್ಥ್ ಆತ್ಮಹತ್ಯೆಯ ಬಳಿಕ ಈ ಉಳ್ಳಾಲ ಸೇತುವೆ ಬಳಿ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಕಳೆದ ಒಂದು ವರ್ಷದಲ್ಲಿ 16 ಮಂದಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಇದೀಗ ಈ ಸೇತುವೆ ಬಳಿ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ನೇತ್ರಾವತಿ ಸೇತುವೆಯು 800 ಮೀ. ಉದ್ದವಿದೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಹೋಗುವ ಹಾಗೂ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬರುವ ಎರಡು ಸೇತುವೆಗಳಿದ್ದು, ಈ ಎರಡೂ ಸೇತುವೆಗಳಿಗೆ ಎರಡೂ ಬದಿ ರಕ್ಷಣಾ ಬೇಲಿಯನ್ನು ಅಳವಡಿಸಲಾಗುತ್ತಿದೆ. ತಡೆಗೋಡೆಯ ಮೇಲೆ ರಕ್ಷಣಾ ಬೇಲಿಯು 5 ಅಡಿ ಎತ್ತರವಿದ್ದು, ಅದರ ಮೇಲೆ 1 ಅಡಿಯಷ್ಟು ಮುಳ್ಳುತಂತಿ ಇದೆ. ಕಬ್ಬಿಣದ ಬೇಲಿಯನ್ನು ವರ್ಕ್‌ ಶಾಪ್‌ನಲ್ಲಿ ತಯಾರಿಸಿ ಬಳಿಕ ಸೇತುವೆಯ ಬಳಿಗೆ ಸಾಗಿಸಿ, ಕಬ್ಬಿಣದ ಸರಳುಗಳನ್ನು ಉಪಯೋಗಿಸಿ ಸೇತುವೆಗೆ ವೆಲ್ಡಿಂಗ್‌ ಮಾಡಿ ಜೋಡಿಸಲಾಗುತ್ತದೆ. ಬೇಲಿಯ ಮೇಲೂ ಹತ್ತಲು ಸಾಧ್ಯವಾಗದಂತೆ ಮೇಲ್ಭಾಗಕ್ಕೂ ನಾಲ್ಕು ಸಾಲು ಮುಳ್ಳುತಂತಿಯನ್ನು ರಸ್ತೆಯ ಭಾಗಕ್ಕೆ ಬಗ್ಗಿಸಿ ಜೋಡಣೆ ಮಾಡಲಾಗುತ್ತಿದೆ.

Also Read  ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು..!!!

 

 

error: Content is protected !!
Scroll to Top