(ನ್ಯೂಸ್ ಕಡಬ) newskadaba.com ದಾವಣಗೆರೆ,ಜು.31: ಮಾರಕ ಕೊರೋನಾದಿಂದಾಗಿ ಮನುಷ್ಯರಿಗಷ್ಟೇ ಅಲ್ಲದೇ, ಪ್ರಾಣಿ-ಪಕ್ಷಿಗಳಿಗೂ ಸಂಕಷ್ಟಗಳು ಎದುರಾಗಿವೆ. ಎಷ್ಟೋ ಕಡೆ ಬೀದಿನಾಯಿಗಳು ಆಹಾರವಿಲ್ಲದೇ ನರಳುತ್ತಿವೆ. ಇಂತಹ ಸಂದರ್ಭದಲ್ಲಿ ದಾವಣೆಗೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೊಲದಲ್ಲಿ ಜೋಳ ಬೆಳೆದು ಪಕ್ಷಿಗಳಿಗೋಸ್ಕರ ಮೀಸಲಿಟ್ಟಿದ್ದಾರೆ.ಸುಮಾರು 3 ಎಕರೆ ಹೊಲದಲ್ಲಿ ಜೋಳ ಬೆಳೆದಿರುವ ಚಂದ್ರಶೇಖರ್ ಸಂಕೋಳ, ಗುಬ್ಬಿ ಸಂತತಿ ಉಳಿಸುವ ಧ್ಯೇಯ ಹೊಂದಿದ್ದಾರೆ. ಆ ಮೂಲಕ ಮಾನವೀಯತೆ ಮೆರೆಯುವ ಕೆಲಸ ಮಾಡುತ್ತಿದ್ದಾರೆ.
ಅಲ್ಲದೇ ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರತಿದಿನ ಪಕ್ಷಿಗಳ ಚಿಲಿಪಿಲಿ ಶಬ್ದವನ್ನು ಕೇಳುತ್ತಾ ತೋಟದ ಕೆಲಸದಲ್ಲಿ ನಿರತರಾಗಿದ್ದಾರೆ.ಎಲ್ಲೆಂದರಲ್ಲಿ ಕೂತಿರುವ ಗುಬ್ಬಿಗಳು ಹಾಗೂ ಗಿಣಿಗಳು, ಸ್ವಚ್ಚಂದವಾಗಿ ಯಾರ ಭಯವಿಲ್ಲದೆ ಜೋಳ ತಿನ್ನುತ್ತಿರುವ ವಿವಿಧ ರೀತಿಯ ಗುಬ್ಬಿಗಳು. ಇದು ದಾವಣಗೆರೆಯ ಚಂದ್ರಶೇಖರ್ ಅವರ ಜೋಳದ ತೋಟದಲ್ಲಿ ಕಂಡು ಬಂದ ದೃಶ್ಯ. ಒಂದೊನಾಂದು ಕಾಲದಲ್ಲಿ ಗುಬ್ಬಿಗಳೆಂದರೆ ಎಲ್ಲಿ ನೋಡಿದರೂ ಕಾಣುತ್ತಿದ್ದವು. ಆದರೆ ಇತ್ತೀಚೆಗೆ ಗುಬ್ಬಿಗಳ ಸಂತತಿ ಕಡಿಮೆಯಾಗುತ್ತಿದೆ. ಹೀಗಾಗಿ ಗುಬ್ಬಿ ಸಂತತಿ ಉಳಿಸಲು ಪಣ ತೊಟ್ಟಿರುವ ಚಂದ್ರಶೇಖರ್ ತಮ್ಮ ಜೋಳದ ತೋಟವನ್ನೇ ಮೀಸಲಿಟ್ಟಿದ್ದಾರೆ. ತಮ್ಮ ಮೂರು ಎಕರೆ ಅಡಿಕೆ ತೋಟದಲ್ಲಿ ಊಟ ಮಾಡುವ ಜೋಳ ಬೆಳೆಯಲು ತೀರ್ಮಾನಿಸಿದ್ದಾರೆ. ಅದೇ ರೀತಿ ಇದೀಗ ಜೋಳ ಉತ್ತಮ ಫಸಲು ಬಂದಿದ್ದು, ಪಕ್ಷಿಗಳಿಗೋಸ್ಕರ ಜೋಳವನ್ನ ಕಟಾವು ಮಾಡದೆ ಹಾಗೇ ಬಿಟ್ಟಿದ್ದಾರೆ. ಪಕ್ಷಿಗಳು ಬಂದರೆ ಅವುಗಳಿಗೆ ತೊಂದರೆ ಮಾಡದೆ ಹಾಗೇ ಬಿಟ್ಟಿದ್ದಾರೆ, ಇದರ ಪರಿಣಾಮ ಇದೀಗ ಸಾವಿರಾರು ವಿವಿಧ ಜಾತಿಯ ಗುಬ್ಬಿಗಳು ಹಾಗೂ ಗಿಣಿಗಳು ಹೊಲಕ್ಕೆ ಬಂದು ಜೋಳವನ್ನು ತಿನ್ನುತ್ತಿವೆ.