(ನ್ಯೂಸ್ ಕಡಬ) newskadaba.com ಮಂಗಳೂರು ಜು.26: ಮಾರಕ ಕೊರೋನಾ ವರೈಸ್ ಸಾಂಕ್ರಾಮಿಕದ ನಡುವೆ ರಾಜ್ಯದ ಸಹಸ್ರಾರು ಮುಜಾರಾಯಿ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಿಮಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ದರ್ಜೆಯ ಸಿಬ್ಬಂದಿಗೆ ವಿಮಾ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.’ಅರ್ಚಕರ ಮನವಿಗೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಐದು ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಮತ್ತು 10 ಲಕ್ಷ ರೂ. ಮೊತ್ತದ ಜೀವ ವಿಮೆ ನೀಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. 34 ಸಾವಿರ ದೇವಸ್ಥಾನಗಳಲ್ಲಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಅರ್ಚಕರು ಮತ್ತು ಸಿಬ್ಬಂದಿ ಇದ್ದಾರೆ. ಇಲಾಖೆ ಹೊರತಾದ ದೇವಳಗಳಿಂದ ಮನವಿ ಬಂದರೂ ಪರಿಗಣಿಸಲಾಗುವುದು.ಕೇಂದ್ರ ಸರ್ಕಾರದ ಜೀವನ್ ಜ್ಯೋತಿ, ಸುರಕ್ಷಾ ಜ್ಯೋತಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪರ್ಸನಲ್ ಆಯಕ್ಸಿಡೆಂಟ್ ವಿಮೆ ಮಾದರಿಯಲ್ಲಿ ವಿಮಾ ಸೌಲಭ್ಯ ಮಾಡುವ ಚಿಂತನೆ ಇದೆ. ಅಧಿಕಾರಿಗಳು ಪ್ರಸ್ತಾಪ ಮಂಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಬಜೆಟ್ ಹೊಂದಾಣಿಕೆ ಬಗ್ಗೆ ಯೋಚನೆ ನಡೆಸಲಾಗುವುದು ಎಂದು ಹೇಳಿದರು. ಇದೇ ವೇಳೆ ರಾಜ್ಯ ಸರ್ಕಾರ ಸಪ್ತಪದಿ ಯೋಜನೆ ಕೈ ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಉಳ್ಳಾಲದಿಂದ ಕಾರವಾರ ತನಕ ಕಡಲ್ಕೊರೆತವಾಗುತ್ತಿದ್ದು, ಜನರಿಗೆ ಸಮಸ್ಯೆಯಾಗದಂತೆ ತಾತ್ಕಾಲಿಕ ಕಲ್ಲು ಹಾಕುವ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.