(ನ್ಯೂಸ್ ಕಡಬ) newskadaba.com ಪುತ್ತೂರು, ಜು.25: ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚಾಗಿ ಸ್ವ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಆದರೆ ಸರಿಯಾದ ಕಾರ್ಯತಂತ್ರ, ವಿಭಿನ್ನ ಆಲೋಚನೆಗಳಿಲ್ಲದೆ ಉದ್ಯಮದಲ್ಲಿ ನಷ್ಟವನ್ನೂ ಅನುಭವಿಸುತ್ತಾರೆ. ಸ್ವ ಉದ್ಯೋಗದಲ್ಲೂ ಇನ್ನೊಬ್ಬರ ಅನುಕರಣೆಯೇ ಈ ನಷ್ಟಕ್ಕೆ ಕಾರಣ ಎನ್ನಬಹುದಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಟ್ಟ ಗ್ರಾಮವೊಂದರ ಸಹೋದರರಿಬ್ಬರು ತಮ್ಮ ಸ್ವ ಉದ್ಯೋಗದ ಮೂಲಕ ಹೆಸರುವಾಸಿಯಾಗಿದ್ದಾರೆ. ಕೋಟಿಗಟ್ಟಲೆ ಬಂಡವಾಳ ಹಾಕಿ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತಯಾರಾಗುವಂತಹ ಪರಿಕರಗಳನ್ನು ತಮ್ಮ ಮನೆಯಲ್ಲೇ ತಯಾರಿಸುವಲ್ಲಿ ಈ ಯುವಕರು ಯಶಸ್ವಿಯಾಗಿದ್ದಾರೆ.
ತಾವೇ ದುಡಿದು ಕಟ್ಟಿದ ಸ್ವ ಉದ್ಯೋಗದಲ್ಲಿ ಇದೀಗ ಐವರು ಕೆಲಸಗಾರರೂ ಸೇರಿಕೊಂಡಿದ್ದಾರೆ. ಪುತ್ತೂರು ಹಾಗೂ ಇತರ ಭಾಗಗಳಿಂದ ಇವರ ಪುಟ್ಟ ಅಂಗಡಿಯಲ್ಲಿ ತಯಾರಾದ ಪರಿಕರಗಳಿಗೆ ಹೆಚ್ಚಿನ ಬೇಡಿಕೆಯೂ ಬರುತ್ತಿದೆ. ತಮ್ಮ ಉದ್ಯಮಕ್ಕೆ ಬೇಕಾದ ಮೂಲ ವಸ್ತುಗಳನ್ನು ರಾಜ್ಯದ ವಿವಿಧ ಭಾಗಗಳಿಂದ ತರಿಸಿಕೊಂಡು, ಆ ವಸ್ತುಗಳಿಂದಲೂ ವಿವಿಧ ರೀತಿಯ ಪರಿಕರಗಳನ್ನು ತಯಾರು ಮಾಡಲಾಗುತ್ತದೆ. ಅಲ್ಲದೆ ಜನರಿಂದ ಆರ್ಡರ್ ಪಡೆದ ವಸ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿರುವುದರಿಂದ ಯುವಕರ ಬದ್ಧತೆಗೆ ಗ್ರಾಮಸ್ಥರೂ ಖುಷಿಯಾಗಿದ್ದಾರೆ.ಕೇಂದ್ರ ಸರಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ ಮೂಲಕ ಹತ್ತು ಲಕ್ಷ ರೂಪಾಯಿಗಳ ಸಾಲ ಪಡೆದು ಈ ಸಹೋದರರು ಈ ಪುಟ್ಟ ಉದ್ಯಮವನ್ನು ಆರಂಭಿಸಿದ್ದಾರೆ. ಕರಾವಳಿಯಲ್ಲಿ ಆಚರಿಸಲ್ಪಡುವ ದೈವಾರಾಧನೆಗೆ ಬೇಕಾದ ಸಲಕರಣೆಗಳನ್ನೂ ಈ ಯುವಕರು ತಮ್ಮ ಮನೆಯಲ್ಲೇ ತಯಾರಿಸುತ್ತಿದ್ದಾರೆ. ದೈವದ ಕತ್ತಿ, ದೈವಗಳ ಮುಖವಾಡ, ದೈವಗಳ ಕಾರ್ಯಕ್ಕೆ ಬೇಕಾದಂತಹ ಇತರ ಸಲಕರಣೆಗಳನ್ನು ಹೆಚ್ಚಾಗಿ ಕೈಯಿಂದಲೇ ತಯಾರಿಸಲಾಗುತ್ತಿದೆ.