(ನ್ಯೂಸ್ ಕಡಬ) newskadaba.com ಮಂಗಳೂರು, ಜು.25: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಶಾಲೆ-ಕಾಲೇಜುಗಳು ಆರಂಭವಾಗಿಲ್ಲ. ಆದರೆ, ಆನ್‌ಲೈನ್ ಪಾಠಗಳೂ ನಿಂತಿಲ್ಲ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ನ ಸಮಸ್ಯೆ ತೀವ್ರವಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ಹರಸಾಹಸ ಮಾಡುತ್ತಿದ್ದಾರೆ. ಕಡಬ ತಾಲ್ಲೂಕಿನ ಕೊಯಿಲಾ ಗ್ರಾಮದ ಕುದ್ಲೂರು ಪರಿಸರದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಗುಡ್ಡ ಹತ್ತಿ ನೆಟ್‌ವರ್ಕ್‌ಗಾಗಿ ಪ್ರಯಾಸ ಪಡುತ್ತಿದ್ದಾರೆ. ಇಲ್ಲಿ ಯಾವುದೇ ಸಿಮ್‌ನ ನೆಟ್‌ವರ್ಕ್ ಕೂಡ ಸಿಗುತ್ತಿಲ್ಲ.
‘ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲವನ್ನೇ ನೋಡಲಾಗದ ಸ್ಥಿತಿ ನಮ್ಮದಾಗಿದೆ. ಮಾತನಾಡಲು ನೆಟ್‌ವರ್ಕ್ ಸಿಗುತ್ತಿಲ್ಲ. ಇನ್ನು ಇಂಟರ್‌ನೆಟ್ ಬಳಸುವುದು ಕನಸಿನ ಮಾತಾಗಿದೆ. ಲಾಕ್‌ಡೌನ್ ಬಳಿಕ ವಿದ್ಯಾಭ್ಯಾಸಕ್ಕಾಗಿ ಇಂಟರ್‌ನೆಟ್ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ ನೆಟ್ ಸಿಗದ ಕಾರಣ ಸಮಸ್ಯೆ ಎದುರಾಗಿದೆ. ಈ ರೀತಿ ಮುಂದುವರಿದರೆ ಹಳ್ಳಿಯ ಮಕ್ಕಳು ಅನಕ್ಷರಸ್ಥರಾದರೆ ಅಚ್ಚರಿ ಇಲ್ಲ’ ಎಂದು ಗ್ರಾಮದ ಮಹರೂಫ್ ಆತೂರು ತಿಳಿಸಿದ್ದಾರೆ.ಕಡಬ, ಮರ್ಧಾಳ, ನೆಟ್ಟಣ, ಬಿಳಿನೆಲೆ ವ್ಯಾಪ್ತಿಯಲ್ಲಿಯೂ ಇದೇ ಸಮಸ್ಯೆ ಮುಂದುವರಿದಿದ್ದು. ಮನೆ ಬಿಟ್ಟು ಪೇಟೆಯ ಬಸ್ ಸ್ಟಾಂಡ್ ಗಲಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ಉಂಟಾಗಿದೆ. ಕೊವೀಡ್ 19 ಸಂಕಷ್ಟಕ್ಕೆ ಒಳಗಾಗಿ ಹಲವರು ವರ್ಕ್ ಫ್ರಮ್ ಹೋಮ್ ನಲ್ಲಿ ತೊಡಗಿದ್ದು ಇವರು ನೆಟ್ ವರ್ಕ್ ಸಮಸ್ಯೆ ಸಿಳುಕಿದಂತಾಗಿದೆ. ಆನ್‌ಲೈನ್ ತರಗತಿಗಾಗಿ ನೆಟ್‌ವರ್ಕ್ ಸಿಗದೇ ಪರದಾಡುತ್ತಿರುವ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾರ್ಥಿಗಳು ಗುಡ್ಡದ ಮೇಲೆ ಟೆಂಟ್ ನಿರ್ಮಿಸಿಕೊಂಡು ಪಾಠ ಕೇಳುತ್ತಿದ್ದಾರೆ.