(ನ್ಯೂಸ್ ಕಡಬ) newskadaba.com ಮಂಗಳೂರು, ಜು.25: ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಈ ಬಾರಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆ ಇಲ್ಲದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಹೂವು, ಸೀಯಾಳ, ಕೇದಗೆ, ಹಿಂಗಾರ ಶುಕ್ರವಾರ ಮಾರುಕಟ್ಟೆಗೆ ಬಂದಿದೆ. ಆದರೆ ಗ್ರಾಹಕರು ಖರೀದಿಗೆ ಆಸಕ್ತಿ ತೋರಿಲ್ಲ.
ಶ್ರೀ ಕ್ಷೇತ್ರ ಕುಕ್ಕೆ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಪ್ರತಿ ವರ್ಷ ನಾಗರ ಪಂಚಮಿ ದಿನದಂದು ಬೆಳಗ್ಗಿನ ಜಾವವೇ ಭಕ್ತರು ಸಾಲಿನಲ್ಲಿ ನಿಲ್ಲುತ್ತಿದ್ದರು. ಈ ವರ್ಷ ಅರ್ಚಕರು ಮಾತ್ರ ನಾಗ ದೇವರಿಗೆ ಹಾಲು ಎರೆಯಲಿದ್ದಾರೆ. ಎಲ್ಲ ದೇವಾಲಯಗಳಲ್ಲೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸರಳವಾಗಿ ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮನೆಗಳ ನಾಗಬನಗಳಲ್ಲಿ ಕುಟುಂಬಸ್ಥರು ಮಾತ್ರ ಜತೆಯಾಗಿ ಹೆಚ್ಚು ಜನ ಸೇರದೆ ಹಾಲು ಎರೆಯಲು ಅವಕಾಶ ಕಲ್ಪಿಸಲಾಗಿದೆ. ಹೂವು, ಸಿಯಾಳ, ಕೇದಗೆ, ಹಿಂಗಾರಕ್ಕೆ ಬೇಡಿಕೆ ಇಲ್ಲದ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ದರವೂ ಕಡಿಮೆಯಾಗಿದೆ. ಕರೊನಾ ಸೋಂಕು ದೇವರ ಆರಾಧನೆಗೂ ಅಡ್ಡಿಯಾಗಿದ್ದು, ನಾಗನ ಕಲ್ಲು, ದೇವರ ಮೂರ್ತಿಗೆ ಬೇಡಿಕೆ ಕುಸಿದಿದೆ.