(ನ್ಯೂಸ್ ಕಡಬ) newskadaba.com ಹೊಸಂಗಡಿ, ಜು.25: ಅಕ್ರಮವಾಗಿ ಕಂಟೈನರ್ ವಾಹನದಲ್ಲಿ 17 ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದನ್ನು ಅಮಾಸೆಬೈಲು ಠಾಣೆಯ ಪೋಲಿಸರು ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಪತ್ತೆ ಹಚ್ಚಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದಾರೆ. ಬಂಧಿತ ಆರೋಪಿಗಳನ್ನು ಹನೀಫ್ ಮಂಗಳೂರು, ಜಾಫರ್ ಸಾಧಿಕ್ ಎಂದು ಗುರುತಿಸಲಾಗಿದೆ.
ಜು.25 ಬೆಳಿಗ್ಗೆ 5 ಗಂಟೆಗೆ ಹೊಸಂಗಡಿ ಚೆಕ್‍ಪೋಸ್ಟ್‍ನಲ್ಲಿ ವಾಹನ ತಪಾಸಣೆಯ ವೇಳೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್‍ಪೋಸ್ಟ್ ಕಡೆಗೆ ಬರುತ್ತಿದ್ದ ಕೆ.ಎ 17 ಡಿ 6471 ಸಂಖ್ಯೆಯ ಕಂಟೈನರ್ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ವಾಹನದಲ್ಲಿ 3 ಕೋಣಗಳು, 13 ಎಮ್ಮೆ ಮತ್ತು 1 ಹೋರಿಯನ್ನು ಹಿಂಸಾತ್ಮಕವಾಗಿ ತುಂಬಿಸಿ ಕಟ್ಟಿ ಹಾಕಿರುವುದು ಕಂಡು ಬಂದಿದೆ. ಹಾವೇರಿಯಿಂದ ಜಾನುವಾರುಗಳನ್ನು ಮಂಗಳೂರಿಗೆ ಕೊಂಡು ಹೋಗಲಾಗುತ್ತಿತ್ತು. ಜಾನುವಾರು ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇರುವುದಿಲ್ಲ. ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿರುವುದರಿಂದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.