ಕಲ್ಲುಗುಡ್ಡೆ: ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಬಕಾರಿ ಇಲಾಖೆ ► ಕೊನೆಗೂ ಮದ್ಯದಂಗಡಿಗೆ ಬೀಗ ಮುದ್ರೆ ಹಾಕಿದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಸುಪ್ರೀಂ ಕೋರ್ಟ್ ಆದೇಶದನ್ವಯ ನೆಲ್ಯಾಡಿ ಹೆದ್ದಾರಿ ಬದಿಯಿಂದ ತೆರವಾಗಿದ್ದ ಮದ್ಯದಂಗಡಿಯನ್ನು ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಆರಂಭಿಸಲಾಗುತ್ತದೆ ಎಂಬ ಮಾಹಿತಿಯನ್ವಯ ಗ್ರಾಮಸ್ಥರು ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದ್ದು, ಅದೇ ಸಮಯದಲ್ಲಿ ಕಲ್ಲುಗುಡ್ಡೆ ಪೇಟೆಯಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮದ್ಯದಂಗಡಿಯನ್ನೂ ತೆರೆದ ಘಟನೆ ನಡೆದಿದೆ.

ಕಳೆದ ಮೂರು ತಿಂಗಳಿನಿಂದ ಮದ್ಯದಂಗಡಿ ತೆರೆಯಲ್ಪಡುತ್ತದೆ ಎನ್ನುವ ಸುದ್ದಿಯಿಂದ ಎಚ್ಚೆತ್ತುಕೊಂಡ ಗ್ರಾಮಸ್ಥರು ಭಾರಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಭಾನುವಾರ ತೆರೆಯಲ್ಪಡುತ್ತದೆ ಎನ್ನುವ ಮಾಹಿತಿಯರಿತ ಹೋರಾಟಗಾರರು ಸಾಯಂಕಾಲ ಕಲ್ಲುಗುಡ್ಡೆಯಲ್ಲಿ ಸಭೆ ಸೇರಿ ಸೋಮವಾರ ಪ್ರತಿಭಟನೆ ನಡೆಸುವ ಯೋಜನೆ ರೂಪಿಸಿದ್ದರು. ಅಂತೆಯೇ ಸೋಮವಾರ 300ಕ್ಕೂ ಹೆಚ್ಚು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇತ್ತ ಪ್ರತಿಭಟನೆ ನಡೆಯುತ್ತಿದ್ದರೆ ಅತ್ತ ಮದ್ಯದಂಗಡಿ ಬೆಳಿಗ್ಗೆಯೆ ತೆರೆದಿತ್ತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಕಲ್ಲುಗುಡ್ಡೆ ಪೇಟೆಯಲ್ಲಿ ತೆರಯಲ್ಪಟ್ಟ ಮದ್ಯದಂಗಡಿಯ ಕಟ್ಟಡ ಸರಕಾರಿ ಸ್ಥಳದಲ್ಲಿದೆ. ಅಲ್ಲದೆ ಮದ್ಯದಂಗಡಿ ತೆರೆಯಬಾರದೆಂಬ ಬಗ್ಗೆ ಮೂರು ತಿಂಗಳಿಂದ ಹೋರಾಟ, ಸಂಬಧಪಟ್ಟವರಿಗೆ ಮನವಿ ನೀಡಲಾಗಿದೆ. ಈಗಾಗಲೇ ತೆರೆದಿರುವ ಮದ್ಯದಂಗಡಿ ಮಸೀದಿ, ಚರ್ಚ್, ದೇವಸ್ಥಾನ, ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಪಶುಸಂಗೋಪಾನಾ ಕಛೇರಿ, ಆರೋಗ್ಯ ಕೇಂದ್ರ, ದಲಿತ ಕಾಲೋನಿ ಪಕ್ಕದಲ್ಲಿದೆ. ಗ್ರಾಮ ಸಭೆಗಳಲ್ಲಿ ಮದ್ಯದಂಗಡಿ ತೆರೆಯಬಾರದೆಂಬುದಾಗಿ ನಿರ್ಣಯಿಸಲಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವಾರು ಮನವಿಗಳನ್ನು ನೀಡಿದ್ದರೂ ಇದ್ಯಾವುದನ್ನೂ ಗಣನೆ ತೆಗೆದುಕೊಳ್ಳದೆ ಅಬಕಾರಿ ಇಲಾಖೆಯು ಪರವಾನಿಗೆ ನೀಡಿದ್ದು, ಮದ್ಯದಂಗಡಿಯ ಕಟ್ಟಡವು ಸರಕಾರಿ ಜಾಗದಲ್ಲಿರುವ ಬಗ್ಗೆ ಮೋಲ್ನೋಟಕ್ಕೆ ಕಂಡುಬರುವುದರಿಂದ ತಹಶೀಲ್ದಾರ್ ಸರ್ವೆ ನಡೆಸಬೇಕು. ಅಬಕಾರಿ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಮದ್ಯದಂಗಡಿಯನ್ನು ಮುಚ್ಚಬೇಕು ಎಂದು ಪಟ್ಟು ಹಿಡಿದರು.


ಸ್ಥಳದಿಂದ ಕಾಲ್ಕಿತ್ತ ಅಬಕಾರಿ ಇನ್ಸ್‌ಪೆಕ್ಟರ್:
ಕೊನೆಗೂ ಸ್ಥಳಕ್ಕೆ ಆಗಮಿಸಿದ ಅಬಕಾರಿ ಇಲಾಖಾ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ರಾವ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಆದೇಶದಂತೆ ಮದ್ಯದಂಗಡಿ ತೆರಯುವುದಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡಲಾಗಿದೆ ಎಂದಾಗ ಆಕ್ರೋಶಿತಗೊಂಡ ಪ್ರತಿಭಟನಕಾರರು ಮದ್ಯದಂಗಡಿ ತೆರೆಯುವುದಕ್ಕೆ ಅನುಮತಿ ನೀಡುವವರು ಮುಚ್ಚಿಸಲು ಆದೇಶಿಸಿ ಎಂದರು. ಪ್ರತಿಭಟನಕಾರರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಹತೋಟಿಗೆ ತಂದರು. ಬಳಿಕ ಮಾತನಾಡಿದ ಅಧಿಕಾರಿ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡುವುದಷ್ಟೆ ನಮ್ಮ ಕರ್ತವ್ಯವಾಗಿದೆ. ಮುಚ್ಚಿಸಲು ಜಿಲ್ಲಾಧಿಕಾರಿಗಳು ಅದೇಶ ನೀಡಿದರೆ ನಾವು ಪಾಲಿಸುತ್ತೆವೆ ಎಂದರು. ಈ ಮಧ್ಯೆ ಅಬಕಾರಿ ಅಧಿಕಾರಿ ತಹಶೀಲ್ದಾರ ಕಛೇರಿಯ ಎಡಬಾಗದಲ್ಲಿರುವ ದಾರಿಯಿಂದ ಪೊಲೀಸೊಬ್ಬರ ರಕ್ಷಣೆಯೊಂದಿಗೆ ವಾಹನ ಹತ್ತಿ ಸ್ಥಳದಿಂದ ಕಾಲ್ಕಿತ್ತರು. ಅಬಕಾರಿ ಇಲಾಖಾಧಿಕಾರಿ ತೆರಳಿದಿರುವುದನ್ನು ವಿರೋಧಿಸಿ ಅಧಿಕಾರಿ ವಿರುದ್ದ ದಿಕ್ಕಾರ ಕೂಗಿದ ಪ್ರತಿಭಟನಾಕಾರರು, ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬಳಿಕ ತಹಶೀಲ್ದಾರ್ ಜಾನ್ಪ್ರಕಾಶ್ ರೋಡ್ರಿಗಸ್ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.

ತಹಶೀಲ್ದಾರ್ ಗೆ ದಿಗ್ಬಂಧನ:
ಮಧ್ಯಾಹ್ನದ ಬಳಿಕ ಕಟ್ಟಡವಿರುವ ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ಜಾನ್ ಪ್ರಕಾಶ್ ಮತ್ತು ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಪ್ರತಿಭಟನಕಾರರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಸರಕಾರಿ ಜಾಗದಲ್ಲಿ ಕಟ್ಟಡ ಕಟ್ಟಿರುವುದು ದೃಢಪಟ್ಟಿತು. ಇದರ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಹೇಳಿ ತಹಶೀಲ್ದಾರ ಮತ್ತು ಕಂದಾಯ ನಿರೀಕ್ಷಕರು ಸ್ಥಳದಿಂದ ತೆರಳಲು ಮುಂದಾದಾಗ ತಹಶೀಲ್ದಾರ್ಗೆ ದಿಗ್ಬಂಧನ ವಿಧಿಸಿದ ಪ್ರತಿಭಟನಾಕಾರರು, ಮದ್ಯದಂಗಡಿ ಮುಚ್ಚಿದ ಬಳಿಕ ತೆರಳುವಂತೆ ಆಗ್ರಹಿಸಿದರು. ಕೊನೆಗೆ ಅಬಕಾರಿ ಇಲಾಖಾಧಿಕಾರಿಗಳ ಸ್ಥಳಕ್ಕೆ ಬರುವ ತನಕ ಕಂದಾಯ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರು ಸ್ಥಳದಲ್ಲೇ ಉಳಿದರು. ಸಂಜೆ ವೇಳೆಗೆ ಸ್ಥಳದಲ್ಲೇ ಅಡುಗೆ ಮಾಡಿ ಗಂಜಿಯೂಟ ಸೇವಿಸಿದ ಪ್ರತಿಭಟನಾಕಾರರು, ಬಾರನ್ನು ಮುಚ್ಚುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕಾಗಮಿಸಿದ ಅಬಕಾರಿ ಅಧಿಕಾರಿ ಸುಬ್ರಹ್ಮಣ್ಯ ರಾವ್ ಪರಿಶೀಲನೆ ನಡೆಸಿ ಅಕ್ರಮ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಹಿನ್ನೆಲೆಯಲ್ಲಿ ಬಂದ್ ಮಾಡಿಸಿದರು. ಶಟರ್ ಎಳೆದು ಬೀಗಮುದ್ರೆ ಹಾಕುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮದ್ಯದಂಗಡಿಯ ಮಾಲಿಕ ಅಬಕಾರಿ ಅಧಿಕಾರಿಯ ವಿರುದ್ದ ಮಾತನಾಡಿ, ಯಾವುದೇ ನೋಟಿಸು ನೀಡದೆ ಹೇಗೆ ಬಂದ್ ಮಾಡಿದ್ದೀರಿ ಎಂದು ವಾಗ್ವದಕ್ಕೆ ಇಳಿದರಲ್ಲದೆ ಸ್ಥಳಕ್ಕೆ ಆಗಮಿಸಿದ್ದ ಮದ್ಯ ಬಾಟಲ್ ಸರಬರಾಜು ಮಾಡುವ ಲಾರಿಲ್ಲಿನ ಮದ್ಯವನ್ನು ಹೊರಗಡೆ ದಾಸ್ತಾನು ಮಾಡಲು ಸಾಧ್ಯವಿಲ್ಲ. ಅಂಗಡಿಯೊಳಗಿಡಲು ಅವಕಾಶ ಮಾಡಿ ಕೊಡುವಂತೆ ಕೇಳಿಕೊಂಡ ಮೇರೆಗೆ ಮುಚ್ಚಲ್ಪಟ್ಟ ಅಂಗಡಿಯನ್ನು ಮತ್ತೆ ತೆರೆದು ದಾಸ್ತನು ಇರಿಸಲು ಅವಕಾಶ ಮಾಡಿಕೊಟ್ಟು, ನಂತರ ಬೀಗಮುದ್ರೆ ಹಾಕಲಾಯಿತು. ಸ್ಥಳದಲ್ಲಿ 500ಕ್ಕೂ ಹೆಚ್ಚು ಗ್ರಾಮಸ್ಥರು ಜಮಾಯಿಸಿದ್ದರು.

ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಕೈಕುರೆ, ಮಲೆನಾಡು ಹಿತರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್, ದಲಿತ ಮುಖಂಡ ಗುರುವಪ್ಪ ಕಲ್ಲುಗುಡ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂಜಿಬಾಳ್ತಿಲ ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಗೌಡ, ಬಿಜೆಪಿ ಮುಖಂಡ ಚಂದ್ರಶೇಖರ ಗೌಡ ಹಳೆನೂಜಿ, ಪ್ರಮುಖರಾದ ಕೇಶವ ಗೌಡ ಬಳ್ಳೇರಿ, ಕಿಟ್ಟು ಕಲ್ಲುಗುಡ್ಡೆ, ಮೋನಪ್ಪ ಗೌಡ, ದಲಿತ ಮುಖಂಡೆ ಸುಂದರಿ ಕಲ್ಲುಗುಡ್ಡೆ, ಕಮಲಾಕ್ಷಿ ಬರೆಮೇಲು ಮೊದಲಾದವರು ಮದ್ಯದಂಗಡಿ ವಿರೋಧಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಸಂಪ್ಯ ಠಾಣಾಧಿಕಾರಿ ಅಬ್ದುಲ್ ಖಾದರ್, ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಗಳು ಬಂದೋಬಸ್ತು ಒದಗಿಸಿದ್ದರು.

ಕಟ್ಟದ ಅನಧಿಕೃತವಲ್ಲ. 2007ರ ವರೆಗೆ ಶರಾಬನ್ನು ಮಾರಾಟ ಮಾಡಲಾಗುತ್ತಿತ್ತು. ಕಟ್ಟಡ ತೆರಿಗೆಯನ್ನು ಈಗಲೂ ಪಾವತಿಸುತ್ತಿದ್ದು, ಆದರೂ ಅನಧಿಕೃತ ಕಟ್ಟಡವೆಂದು ಅಬಕಾರಿ ಅಧಿಕಾರಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಮದ್ಯದಂಗಡಿಯನ್ನು ಮುಚ್ಚಿಸಿದ್ದಾರೆ. ಈ ಬಗ್ಗೆ ಸಂಬಂದಪಟ್ಟವರಿಗೆ ದೂರು ನೀಡಲಾಗುವುದು.
ಎಸಿ ಕುರಿಯಾನ್, ಮದ್ಯದಂಗಡಿ ಮಾಲಿಕ

error: Content is protected !!

Join the Group

Join WhatsApp Group